ಕಲಾ್ಯಣ ಮಂಟಪ ನಿರ್ಮಿಸಲು 12ಲಕ್ಷ ರೂ. ಅನುದಾನ: ಶಾಸಕ ಬಿ.ಬಿ. ನಿಂಗಯ್ಯ
ವಿದ್ಯಾಗಣಪತಿ ವಿಸರ್ಜನಾ ಮಹೋತ್ಸವ

ಚಿಕ್ಕಮಗಳೂರು, ಅ.4: ಹೆಡದಾಳು ಗ್ರಾಮದಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಹಾಗೂ ಬಡವರ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ಕಲ್ಯಾಣ ಮಂಟಪ ನಿರ್ಮಿಸಲು 12 ಲಕ್ಷ ರೂ. ಅನುದಾನ ನೀಡುವುದಾಗಿ ಶಾಸಕ ಬಿ.ಬಿ. ನಿಂಗಯ್ಯ ಭರವಸೆ ನೀಡಿದ್ದಾರೆ.
ಅವರು ವಸ್ತಾರೆ ಹೋಬಳಿಯ ಹೆಡದಾಳು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘ ಹಮ್ಮಿಕೊಂಡಿದ್ದ 31ನೆ ವಿದ್ಯಾಗಣಪತಿ ವಿಸರ್ಜನಾ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಸ್ತು ಮತ್ತು ಸ್ವಚ್ಛತೆಗೆ ಹೆಸರಾಗಿರುವ ಹೆಡದಾಳು ಗ್ರಾಮದಲ್ಲಿ ಬಹಳಷ್ಟು ವಿದ್ಯಾವಂತರು ಹಾಗೂ ಪ್ರತಿಭಾನ್ವಿತ ಯುವ ಸಮೂಹವಿದೆ. ಯುವಕರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಶಿಸ್ತಿನಿಂದ ಒಗ್ಗಟ್ಟು ಪ್ರದರ್ಶಿಸುವುದು ಸ್ವಾಗತಾರ್ಹ ಎಂದರು.
ಗ್ರಾಮದ ಪ್ರತಿಭೆಗಳು ಬೆಳಗಬೇಕಾದರೆ ಪ್ರೋತ್ಸಾಹ ಅಗತ್ಯ.
ಈ ನಿಟ್ಟಿನಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಿದರೆ ಸ್ವಲ್ಪಅನುಕೂಲವಾಗುತ್ತದೆ. ಬಡವರ ಕಲ್ಯಾಣ ಕಾರ್ಯಗಳಿಗೂ ಸಹಕಾರಿ ಯಾಗುತ್ತದೆ ಎಂಬ ನಿಟ್ಟಿನಲ್ಲಿ ನಿಮ್ಮಿಂದಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಎಂಎಲ್‌ಸಿ ಎಂ.ಕೆ. ಪ್ರಾಣೇಶ್ ಮಾತನಾಡಿ, ಜಿಲ್ಲೆಯಲ್ಲಿಯೇ ಈ ಗ್ರಾಮ ಮಾದರಿಯಾಗುವ ಸಂಬಂಧ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ರಂಗಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ನೀಡುವುದಾಗಿ ತಿಳಿಸಿದರು.
ಸಂಘದ ಅಧ್ಯಕ್ಷ ಬಿ.ಪುಟ್ಟರಾಜು ಮಾತನಾಡಿ, ಗ್ರಾಮದಲ್ಲಿ ಗುರುಹಿರಿಯರು ಹಾಕಿಕೊಟ್ಟ ಒಳ್ಳೆಯ ಮಾರ್ಗದಲ್ಲಿ ಯುವ ಸಮೂಹ ಸಾಗುತ್ತಿದ್ದು, 20 ವರ್ಷಗಳ ಹಿಂದೆ ಆರಂಭವಾದ ಯುವಕ ಸಂಘ ಕ್ರಿಯಾಶೀಲವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಾಂಸ್ಕೃತಿಕ ಕಾರ್ಯಗಳ ಮೂಲಕ ಒಗ್ಗಟ್ಟಾಗಿ ಜೀವನ ನಡೆಸಲು ಸಹಕಾರಿಯಾಗುತ್ತಿದೆ ಎಂದರು.
ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಜಿಪಂ ಸದಸ್ಯ ಹಿರಿಗಯ್ಯ, ಗ್ರಾಪಂ ಅಧ್ಯಕ್ಷ ನುಷ್ರತ್‌ಅಲಿ, ಸದಸ್ಯರಾದ ಸುಧಾ ಧರ್ಮೇಗೌಡ, ಜಯರಾಂ, ಮುಖಂಡರಾದ ಸಂಪತ್, ಪ್ರವೀಣ್, ಶಂಕರ್, ಜಾನಯ್ಯ, ಜಗದೀಶ್, ಸಂಘದ ಕಾರ್ಯದರ್ಶಿ ಎಚ್.ಎಂ. ಗಣೇಶ್, ಹೆಡದಾಳ್ ಕುಮಾರ್, ಶಿಕ್ಷಕಿ ಸುಶ್ಮಿತಾ ಮತ್ತಿತರರಿದ್ದರು.







