ವಾಹನ ಚಾಲನೆಪರವಾನಿಗೆ ಕಾರ್ಯಾಗಾರ

ತರೀಕೆರೆ, ಅ.4: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಜಿ.ಎಚ್. ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್, ರಾಯಣ್ಣ ಯುವ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಹಾಗೂ ವಾಹನ ಚಾಲನೆ ಪರವಾನಿಗೆ ಕಾರ್ಯಾಗಾರವನ್ನು ಮಂಗಳವಾರ ಏರ್ಪಡಿಸಲಾಗಿತ್ತು.
ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಜಿ.ಎಚ್. ಶ್ರೀನಿವಾಸ್, ತಾಲೂಕಿನಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಕೆಲಸ ಆರಂಭಿಸಿರುವುದು ಈ ಭಾಗದ ಜನತೆಗೆ ಉಪಯುಕ್ತವಾಗಿದೆ ಎಂದು ಹೇಳಿದರು.
18 ವರ್ಷ ತುಂಬಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲೈಸೆನ್ಸ್ ಕೊಡಿಸುವ ಉದ್ದೇಶದಿಂದ ಶಾಸಕರ ಕಾರ್ಯಾಲಯದಲ್ಲಿ ಒಂದು ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು, ವಯಸ್ಸಿನ ದೃಢೀಕರಣ, ಫೋಟೊ, ವಿಳಾಸ ದಾಖಲೆ ತಲುಪಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಖ್ಯಾತ ಜಾನಪದ ವಿದ್ವಾಂಸ ಅಪ್ಪುಗೆರೆ ತಿಮ್ಮರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜು, ರಾಯಣ್ಣ ಯುವ ವೇದಿಕೆ ಅಧ್ಯಕ್ಷ ದರ್ಶನ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಚಂದ್ರಪ್ಪ, ಆರ್‌ಟಿಒ ಇಲಾಖೆಯ ಅಧಿಕಾರಿ ಈಶ್ವರ್‌ನಾಯಕ್, ಪ್ರಾಂಶುಪಾಲ ಶಾಂತಮೂರ್ತಿ, ಪ್ರಾಧ್ಯಾಪಕರಾದ ಹರೀಶ್, ಕುಮಾರ್, ಚಂದ್ರಶೇಖರ್‌ಮತ್ತಿತರರಿದ್ದರು.







