ಸೇನೆಯನ್ನು ಕಡೆಗಣಿಸಬೇಡಿ
ದಾಳಿಗೆ ಸಾಕ್ಷ ಕೇಳಿದ್ದ ಕೇಜ್ರಿವಾಲ್‌ಗೆ ಬಿಜೆಪಿ ತರಾಟೆ
ಹೊಸದಿಲ್ಲಿ, ಅ.4: ಆಪ್ ಮತ್ತು ಕಾಂಗ್ರೆಸ್ ವಿರುದ್ಧ ಇಂದಿಲ್ಲಿ ತೀವ್ರ ದಾಳಿ ನಡೆಸಿದ ಬಿಜೆಪಿಯು, ಕಳೆದ ವಾರ ನಿಯಂತ್ರಣ ರೇಖೆಯಾಚೆಯಲ್ಲಿ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತವು ನಡೆಸಿದ ಸರ್ಜಿಕಲ್ ದಾಳಿಗಳ ಕುರಿತು ಶಂಕೆಗಳನ್ನು ವ್ಯಕ್ತಪಡಿಸುವ ಮೂಲಕ ಅವು ಸೇನೆಯ ನೈತಿಕ ಸ್ಥೈರ್ಯವನ್ನು ಉಡುಗಿಸುತ್ತಿವೆ ಎಂದು ಆರೋಪಿಸಿತು.
ಸರ್ಜಿಕಲ್ ದಾಳಿಗಳ ಚಿತ್ರಗಳನ್ನು ಬಹಿರಂಗಗೊಳಿಸುವ ಮೂಲಕ ಅಂತಹ ದಾಳಿಗಳು ನಡೆದೇ ಇಲ್ಲವೆಂಬ ಪಾಕಿಸ್ತಾನದ ಸುಳ್ಳನ್ನು ಬಯಲಿಗೆಳೆಯುವಂತೆ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಸುದ್ದಿಗೋಷ್ಠಿಯಲ್ಲಿ ತೀವ್ರ ತರಾಟೆಗೆತ್ತಿಕೊಂಡ ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ರವಿಶಂಕರ ಪ್ರಸಾದ್ ಅವರು, ರುಜುವಾತನ್ನು ಕೇಳುವ ನೆಪದಲ್ಲಿ ದಯವಿಟ್ಟು ಸಶಸ್ತ್ರ ಪಡೆಗಳ ಧೈರ್ಯ ಮತ್ತು ಬಲಿದಾನವನ್ನು ಕಡೆಗಣಿಸಬೇಡಿ ಎಂದು ಹೇಳಿದರು.
ಪಾಕ್ ವಿರುದ್ಧ ಕಾರ್ಯಾಚರಣೆ ನಡೆಸಿದ್ದಕ್ಕಾಗಿ ಮೋದಿಯವರನ್ನು ಹೊಗಳುತ್ತ ಕೇಜ್ರಿವಾಲ್‌ರ ಈ ಆಗ್ರಹ ವಿವಾದವನ್ನು ಹುಟ್ಟುಹಾಕಿತ್ತು. ಅವರ ಈ ಹೇಳಿಕೆಯನ್ನು ಹಲವಾರು ಪಾಕ್ ಪತ್ರಿಕೆಗಳು ಪ್ರಮುಖ ಸುದ್ದಿಯನ್ನಾಗಿ ಪ್ರಕಟಿಸಿವೆ.
ಕೇಜ್ರಿವಾಲ್‌ರನ್ನು ಕಟುವಾಗಿ ಟೀಕಿಸಿದ ಪ್ರಸಾದ್, ಭಾರತವು ಮುಂಬರುವ ಸಾರ್ಕ್ ಶೃಂಗಸಭೆ ಸೇರಿದಂತೆ ಎಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸಿರುವ ಈ ಸಮಯದಲ್ಲಿ ಕೇಜ್ರಿವಾಲ್ ತಪ್ಪು ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದರು.





