ಕಾರ್ಯಪ್ಪ ಕಾಲೇಜು ಅಭಿವೃದಿಗೆ ಕ್ರಮ: ಪ್ರೊ. ಕೆ.ಬೈರಪ್ಪ
ಮಹಿಳಾ ವಸತಿ ನಿಲಯದ ನೂತನ ಕಟ್ಟಡ

ಮಡಿಕೇರಿ, ಅ.4: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪಕಾಲೇಜಿಗೆ ಮತ್ತಷ್ಟು ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸುಸಜ್ಜಿತ ಬಹುಮಹಡಿ ಕಟ್ಟಡ ನಿರ್ಮಿಸಲು ಮಂಗಳೂರು ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ ತಯಾರಿ ನಡೆಸಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಕೆ.ಬೈರಪ್ಪ ತಿಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಬಳಿ ಸುಮಾರು ರೂ.1 ಕೋಟಿ 3 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮಹಿಳಾ ವಸತಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು
. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪಕಾಲೇಜು ನ್ಯಾಕ್ ಸಂಸ್ಥೆಯಿಂದ ಎ ಶ್ರೇಣಿ ಮಾನ್ಯತೆಯೊಂದಿಗೆ ಉತ್ಕೃಷ್ಟತೆಯ ಸಾಮರ್ಥ್ಯವುಳ್ಳ ಸಂಸ್ಥೆ ಎಂಬ ಯುಜಿಸಿ ಮಾನ್ಯತೆಯನ್ನು ಪಡೆದಿದೆ. ಇದರ ಜೊತೆಗೆ ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ ಕಾಲೇಜಿಗೆ ಸುಸಜ್ಜಿತ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಬಹುಮಹಡಿ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕುಲಪತಿ ಪ್ರೊ. ಕೆ.ಬೈರಪ್ಪತಿಳಿಸಿದರು.
ಕೆ.ಎಂ. ಕಾರ್ಯಪ್ಪಕಾಲೇಜಿನ ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದರಲ್ಲಿ ಶೇ. 65 ರಷ್ಟು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿನಿಯರು ಹೆಚ್ಚಾಗಿ ದೂರದ ಗ್ರಾಮೀಣ ಭಾಗಗಳಿಂದ ಬರುವುದರಿಂದ ಮಹಿಳಾ ವಸತಿ ನಿಲಯದ ಬೇಡಿಕೆ ಸಾಕಷ್ಟು ವರ್ಷದಿಂದ ಇತ್ತು. ಸದ್ಯ ಈಗ ಯುಜಿಸಿ ಸಹಯೋಗದೊಂದಿಗೆ ಈಡೇರಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾರ್ಯಕಾರಿ ಅಭಿಯಂತರ ಚಂದ್ರಶೇಖರ್, ಗಾಯತ್ರಿದೇವಿ ಹಾಗೂ ಕಾಲೇಜು ಪಿಟಿಐ ಪದಾಧಿಕಾರಿಗಳಾದ ನಂದಿನೆರವಂಡ ಅಪ್ಪಯ್ಯ, ಬಿ.ಎಸ್. ಆನಂದ, ಶಿವಕುಮಾರ್ ಮತ್ತಿತರರಿದ್ದರು







