ಎನ್ನೆಸ್ಸೆಸ್ ಶಿಬಿರ ಪಠ್ಯಪೂರಕ ಚಟುವಟಿಕೆ: ಸೋಮಶೇಖರ್
ವಾರ್ಷಿಕ ವಿಶೇಷ ಶಿಬಿರ 2016-17

ಚಿಕ್ಕಮಗಳೂರು ಅ.4: ಎನ್ನೆಸ್ಸೆಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಲೋಕಾನುಭವವನ್ನು ಕಟ್ಟಿಕೊಡುತ್ತದೆ. ರಾಷ್ಟ್ರೀಯ ಸೇವಾಯೋಜನೆ ಪಠ್ಯಪೂರಕ ಚಟುವಟಿಕೆಯೇ ಹೊರತು, ಪಠ್ಯೇತರವಲ್ಲ. ಇಲ್ಲಿ ಕಲಿಯುವುದು ಬಹಳಷ್ಟಿದೆ ಎಂದು ಜಿಪಂ ಸದಸ್ಯ ಬೀಕನಹಳ್ಳಿ ಸೋಮಶೇಖರ್ ನುಡಿದರು.
ಅವರು ಬ್ಯಾಗದಹಳ್ಳಿಯಲ್ಲಿ ನಗರದ ಮೌಂಟೆನ್ ವ್ಯೆ ಪದವಿಪೂರ್ವ ಕಾಲೇಜು ಎನ್ನೆಸ್ಸೆಸ್ ಘಟಕ ಆಯೋಜಿಸಿರುವ ಏಳುದಿನಗಳ ವಾರ್ಷಿಕ ವಿಶೇಷ ಶಿಬಿರ 2016-17ನ್ನು ಉದ್ಘಾಟಿಸಿ ಮಾತನಾಡಿದರು. ಪುಸ್ತಕದಲ್ಲಿಲ್ಲದ ಅನೇಕ ಹೊಸ ಸಂಗತಿಗಳನ್ನು ಎನ್ನೆಸ್ಸೆಸ್ ತರಬೇತಿಯಲ್ಲಿ ಪಡೆಯಲು ಸಾಧ್ಯ. ವಿಶೇಷವಾಗಿ ಸಾಮಾನ್ಯ ಜ್ಞಾನ, ಎಲ್ಲರೊಂದಿಗೆ ಬೆರೆಯುವ ಗುಣ ಸೇರಿದಂತೆ ಹತ್ತಾರು ಹೊಸ ವಿಷಯಗಳನ್ನು ಕಲಿಯಲು ಶಿಬಿರದಲ್ಲಿ ಅವಕಾಶವಿದ್ದು, ಲೋಕಾನುಭವ ಹೆಚ್ಚಿಸುವ ಮೂಲಕ ಬದುಕಿಗೆ ಭದ್ರ ಬುನಾದಿಯನ್ನು ಒದಗಿಸುತ್ತದೆ ಎಂದರು.
ಪಿಯು ಡಿಡಿಪಿಐ ಇಶ್ರತ್ ನೌಶಾದ್‌ಬಾನು ಮಾತನಾಡಿ, ಶಿಸ್ತು ಮತ್ತು ಸಂಯಮ ರೂಢಿಸಿಕೊಂಡರೆ ಜೀವನದ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಪಡೆಯಬಹುದು. ನಿಯಮ ಮತ್ತು ಸಮಯ ಪಾಲನೆ ಇದ್ದರೆ ಕಾಲಮಿತಿಯ ಸಾಧನೆ ಸಾಧ್ಯ. ವ್ಯಕ್ತಿ ಹಿತದ ಜೊತೆಗೆ ಸಮಷ್ಠಿ ಹಿತ ಪಾಲನೆಗೆ ಎನ್ನೆಸ್ಸೆಸ್ ಪೂರಕ. ಸ್ತ್ರೀ ಪುರುಷ ಸೇರಿದಂತೆ ಎಲ್ಲ ವಿಧದ ತಾರತಮ್ಯಗಳನ್ನು ಹೋಗಲಾಡಿಸಿ ಸದ್ಭಾವನೆ ಬೆಸೆಯಲು ಶಿಬಿರ ಸಹಕಾರಿ. ಬದುಕಿನಲ್ಲಿ ಒಳ್ಳೆಯ ಬದಲಾವಣೆಯೊಂದಿಗೆ ಶಿಬಿರಾರ್ಥಿಗಳು ಮನೆಗೆ ಹಿಂದಿರುಗಬೇಕೆಂದರು.
ಟಿ.ಪಿ.ಎಸ್ ಮಾಜಿ ಉಪಾಧ್ಯಕ್ಷ ಎಚ್.ಎಸ್.ಪುಟ್ಟೇಗೌಡ ಮಾತನಾಡಿದರು. ತಾ ಪಂ ಸದಸ್ಯೆ ದಾಕ್ಷಾಯಿಣಿ, ಅಲ್ಲಂಪು ಗ್ರಾಪಂ ಸದಸ್ಯರಾದ ಬ್ಯಾಗದಹಳ್ಳಿಯ ಸಿ.ಜೆ.ಲೀಲಾ ಮತ್ತು ಹಾಲೇಶ್, ಪ್ರಭುಲಿಂಗಶಾಸ್ತ್ರಿ ಮಾತನಾಡಿದರು.
ಮೌಂಟೆನ್‌ವ್ಯೆ ಪ್ರಾಂಶುಪಾಲೆ ತಸ್ನೀಮ್ ಫಾತಿಮಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾಧಿಕಾರಿ ಬಿ.ಎಸ್. ಶಿವರಾಜ್ ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕ ಮುದಬೀರ್‌ಶಹಬಾಝ್ ಉಪಸ್ಥಿತರಿದ್ದರು. ಸಹಶಿಬಿರಾಧಿಕಾರಿಗಳಾದ ಎಚ್.ಪಿ. ರಘು ಸ್ವಾಗತಿಸಿ, ಬಬಿತಾ ವಂದಿಸಿದರು. ಉಪನ್ಯಾಸಕ ವಿವೇಕ ಪ್ರಭು ಕಾರ್ಯಕ್ರಮ ನಿರೂಪಿಸಿದರು.







