ಬಿಸಿಸಿಐ ಬ್ಯಾಂಕ್ ಖಾತೆಯ ದೈನಂದಿನ ಖರ್ಚು-ವೆಚ್ಚಕ್ಕೆ ನಿರ್ಬಂಧವಿಲ್ಲ
ಲೋಧಾ ಸಮಿತಿ ಸ್ಪಷ್ಟನೆ

ಹೊಸದಿಲ್ಲಿ, ಸೆ.4: ಬಿಸಿಸಿಐ ಬ್ಯಾಂಕ್ ಖಾತೆಗೆ ನಿರ್ಬಂಧ ಹೇರುವಂತೆ ನಿರ್ದೇಶನ ನೀಡಿಲ್ಲ. ಬಿಸಿಸಿಐ ಖಾತೆಯಿಂದ ಎರಡು ನಿರ್ದಿಷ್ಟ ರಾಜ್ಯ ಅಸೋಸಿಯೇಶನ್‌ಗೆ ಹಣ ಬಿಡುಗಡೆ ಮಾಡದಂತೆ ಸೂಚಿಸಲಾಗಿತ್ತು. ಕ್ರಿಕೆಟ್ ಪಂದ್ಯಗಳ ಆಯೋಜನೆ ಸೇರಿದಂತೆ ಇತರ ದೈನಂದಿನ ಖರ್ಚುವೆಚ್ಚಕ್ಕೆ ಹಣ ಬಳಸಿಕೊಳ್ಳಲು ತನ್ನ ಅಭ್ಯಂತರವಿಲ್ಲ ಎಂದು ಜಸ್ಟೀಸ್ ಆರ್‌ಎಂ ಲೋಧಾ ಸಮಿತಿ ಮಂಗಳವಾರ ಸ್ಪಷ್ಟಪಡಿಸಿದೆ.
ತನ್ನ ಶಿಫಾರಸುಗಳನ್ನು ಸರಿಯಾದ ಜಾರಿಗೆ ತರದ ಬಿಸಿಸಿಐ ಮೇಲೆ ಆಕ್ರೋಶಗೊಂಡಿದ್ದ ಸುಪ್ರೀಂಕೋರ್ಟ್‌ನಿಂದ ನೇಮಿಲಸ್ಪಟ್ಟ ಲೋಧಾ ಸಮಿತಿ, ಸೋಮವಾರ ನೀಡಿದ ತನ್ನ ಆದೇಶದಲ್ಲಿ ಬಿಸಿಸಿಐ ವಿಶೇಷ ಮಹಾಸಭೆಯಲ್ಲಿ ಅನುಮೋದಿಸಿದ ಆರ್ಥಿಕ ನಿರ್ಧಾರಗಳಿಗೆ ಹಣ ಬಿಡುಗಡೆ ಮಾಡುವಂತಿಲ್ಲ ಎಂದು ಬಿಸಿಸಿಐ ಖಾತೆ ಹೊಂದಿರುವ ಬ್ಯಾಂಕ್‌ಗಳಿಗೆ ಸೂಚನೆ ನೀಡಿತ್ತು.
ಲೋಧಾ ಸಮಿತಿಯ ನಿರ್ದೇಶನದಂತೆ ಬ್ಯಾಂಕ್ ಖಾತೆ ನಿರ್ಬಂಧಕ್ಕೊಳಪಟ್ಟರೆ ನ್ಯೂಝಿಲೆಂಡ್ ವಿರುದ್ಧ ಸರಣಿಯನ್ನು ರದ್ದುಪಡಿಸಬೇಕಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಗಳು ನೀಡಿರುವ ಹೇಳಿಕೆಗೆ ಮಂಗಳವಾರ ಪ್ರತಿಕ್ರಿಯಿಸಿರುವ ಲೋಧಾ ಸಮಿತಿ,‘‘ನಾವು ಬಿಸಿಸಿಐ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಿಲ್ಲ್ಲ. ರಾಜ್ಯ ಸಂಸ್ಥೆಗಳಿಗೆ ಹಣ ವಿತರಿಸದಂತೆ ಬಿಸಿಸಿಐಗೆ ಸೂಚಿಸಿದ್ದೇವೆ. ದೈನಂದಿನ ವ್ಯವಹಾರಗಳು, ಪ್ರತಿದಿನದ ಖರ್ಚುವೆಚ್ಚ, ಪಂದ್ಯಗಳು ಎಂದಿನಂತೆ ಮುಂದುವರಿಯಲಿವೆೆ. ಇದಕ್ಕೆ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ ಎಂದು ಹೇಳಿದೆ.
ಕೇವಲ ಎರಡು ನಿರ್ದಿಷ್ಟ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡದಂತೆ ನಿರ್ಬಂಧಿಸಲಾಗಿದೆ. ಇತರ ಕ್ರಿಕೆಟ್ ಸಂಸ್ಥೆಗಳಿಗೆ ಕ್ರಿಕೆಟ್ ಪಂದ್ಯ ಆಯೋಜನೆಗೆ ಇದರಿಂದ ತೊಂದರೆಯಾಗದು ಎಂದು ಲೋಧಾ ಸಮಿತಿಯ ಕಾರ್ಯದರ್ಶಿ ಗೋಪಾಲ್ ಶಂಕರ್‌ನಾರಾಯಣನ್ ಹೇಳಿದ್ದಾರೆ.
‘‘ಸದಸ್ಯರೆಲ್ಲರೂ ನ್ಯಾಯಾಲಯದ ತೀರ್ಪಿನಿಂದ ನೊಂದಿದ್ದಾರೆ. ಪಂದ್ಯಗಳನ್ನು ಆಯೋಜಿಸಲು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಮಾತೃ ಸಂಸ್ಥೆ ಬಿಸಿಸಿಐಯನ್ನು ಹೆಚ್ಚು ಅವಲಂಭಿಸಿದೆ. ಈ ತನಕ ಏಳು ಸಂಸ್ಥೆಗಳು ಪಂದ್ಯ ಆಯೋಜಿಸಲು ನಮ್ಮಿಂದ ಸಾಧ್ಯವಿಲ್ಲ.ಲೋಧಾ ಸಮಿತಿಯ ಹೊಸ ಆದೇಶದಿಂದ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸಮಸ್ಯೆ ಎದುರಿಸುವಂತಾಗಿದೆ. ಈಗ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಸರಣಿಯನ್ನು ರದ್ದುಪಡಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ’’ ಎಂದು ಬಿಸಿಸಿಐನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಲೋಧಾ ಸಮಿತಿಯು ಬಿಸಿಸಿಐನ ಕಾರ್ಯಚಟುವಟಿಕೆಯಲ್ಲಿ ಪದೇ ಪದೇ ಮಧ್ಯಪ್ರವೇಶಿಸುತ್ತಿದೆ. ಬಿಸಿಸಿಐ ಆಡಳಿತದಲ್ಲಿ ಭಾರತ ಕ್ರಿಕೆಟ್‌ನ ಸೂಪರ್ ಪವರ್ ಆಗಿದೆ. ಸರಕಾರ ಸಹಿತ ಯಾರಿಂದಲೂ ಒಂದು ಪೈಸೆ ಪಡೆಯದೇ ಏಕೈಕ ಕ್ರೀಡಾ ಸಂಸ್ಥೆ ನಮ್ಮದು. ನಮ್ಮದೇ ಖರ್ಚಿನಲ್ಲಿ ಎಲ್ಲ ಮೂಲಭೂತ ಸೌಲಭ್ಯವನ್ನು ಮಾಡಿಕೊಂಡಿದ್ದೇವೆ ಎಂದು ಬಿಸಿಸಿಐನ ಹಿರಿಯ ಆಡಳಿತಾಧಿಕಾರಿ ಹೇಳಿದ್ದಾರೆ.
ಬಿಸಿಸಿಐ ಅಧಿಕಾರಿಗಳನ್ನು ಕಟ್ಟಿಹಾಕಬೇಕಿತ್ತು: ಕಾಟ್ಜು
ಲೋಧಾ ಸಮಿತಿಯು ಬಿಸಿಸಿಐ ಅಧಿಕಾರಿಗಳನ್ನು ಇಷ್ಟಕ್ಕೆ ಬಿಡಬಾರದಿತ್ತು. ಬಿಸಿಸಿಐ ಅಧಿಕಾರಿಗಳ ಕೈಗಳನ್ನು ಕಟ್ಟಿಹಾಕಿ, ಬೆನ್ನಿಗೆ 100 ಚಾಟಿ ಏಟು ನೀಡಬೇಕಾಗಿತ್ತು ಎಂದು ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮಾರ್ಕೆಂಡೇಯ ಕಾಟ್ಜು ಟ್ವೀಟ್ ಮಾಡಿದ್ದಾರೆ.
ಆರು ವಾರಗಳ ಹಿಂದೆ ಬಿಸಿಸಿಐ ಸುಧಾರಣೆಯ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು, ಅಸಂವಿಧಾನಿಕ ಹಾಗೂ ಕ್ರಮಬದ್ಧವಾಗಿಲ್ಲ ಎಂದು ಟೀಕಿಸಿದ್ದ ಕಾಟ್ಜು ಇದೀಗ ಬಿಸಿಸಿಐ ವಿರುದ್ಧವೇ ಕಿಡಿಕಾರಿದ್ದಾರೆ.







