ಪಾಕಿಸ್ತಾನವನ್ನು ಮಣ್ಣು ಮುಕ್ಕಿಸಲು ಭಾರತ ಸಿದ್ದ: ಠಾಕೂರ್

ಹೊಸದಿಲ್ಲಿ, ಅ.4: ಭಾರತದ ಮೇಲೆ ‘ಆಲೌಟ್’ ದಾಳಿ ಮಾಡಲು ಪಾಕ್ ಸಿದ್ಧ್ದ ಎಂದು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ನೀಡಿರುವ ಹೇಳಿಕೆಗೆ ತೀಕ್ಣವಾಗಿ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ‘‘ ಅಗತ್ಯ ಬಿದ್ದರೆ ಪಾಕ್‌ನ್ನು ಮಣ್ಣು ಮುಕ್ಕಿಸಲು ಯಾವತ್ತೂ ಸಿದ್ದ’’ ಎಂದು ಹೇಳಿದ್ಧಾರೆ
ಮಾಜಿ ನಾಯಕ ಮಿಯಾಂದಾದ್ ಅವರು ಪಾಕ್ ಕ್ರಿಕೆಟ್ ಹಾಗೂ ಯುದ್ಧದಲ್ಲಿ ಅನುಭವಿಸಿರುವ ಸೋಲಿನ ಆಘಾತದಿಂದ ಇನ್ನೂ ಹೊರ ಬಂದಿಲ್ಲ. ಈ ಕಾರಣದಿಂದಾಗಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಭಾರತದ ಸೈನಿಕರು ಗಡಿ ನಿಯಂತ್ರಣಾ ರೇಖೆಯನ್ನು ದಾಟಿ ಪಾಕ್ ನೆಲದಲ್ಲಿ ಉಗ್ರರನ್ನು ಸದೆ ಬಡಿದ ಹಿನ್ನೆಲೆಯಲ್ಲಿ ಮಿಯಾಂದಾದ್ ನೀಡಿದ ಹೇಳಿಕೆಗೆ ಠಾಕೂರ್ ಪ್ರತಿಕ್ರಿಯೆ ನೀಡಿದ್ದಾರೆ.
‘‘1965, 1971 ಮತ್ತು ಕಾರ್ಗಿಲ್ ಯುದ್ಧದಲ್ಲಿ ಆಗಿರುವ ಗಾಯದಿಂದ ಪಾಕಿಸ್ತಾನ ಚೇತರಿಸಿಕೊಂಡಿಲ್ಲ. ಇದೇ ರೀತಿ ವಿಶ್ವಕಪ್‌ನಲ್ಲಿ ಭಾರತವನ್ನು ಒಂದು ಪಂದ್ಯದಲ್ಲೂ ಸೋಲಿಸಲು ಸಾಧ್ಯವಾಗಿಲ್ಲ’’ ಎಂದು ಠಾಕೂರ್ ಹೇಳಿದ್ದಾರೆ.
ಮಿಯಾಂದಾದ್‌ಗೆ ಅವರ ಜನರಲ್ಲಿ ನಂಬಿಕೆ ಇದ್ದರೆ ಅವರ ಸಂಬಂಧಿ ಭೂಗತ ಪಾತಕಿ ದಾವೂದ್ ಇಬ್ರಾಹೀಂಗೆ ಭಾರತಕ್ಕೆ ವಾಪಸಾಗಲು ಹೇಳಲಿ. ಯಾಕೆ ಅವರು ಹಾಗೆ ಮಾಡುವುದಿಲ್ಲ ? ಭಾರತ ಈಗಾಗಲೇ ಪಾಕಿಸ್ತಾನವನ್ನು ಸೋಲಿಸಿದೆ. ಭವಿಷ್ಯದಲ್ಲೂ ಸೋಲಿಸಲಿದೆ’’ ಎಂದು ಠಾಕೂರ್ ಅಭಿಪ್ರಾಯಪಟ್ಟರು.
ಈಗಿನ ಪರಿಸ್ಥಿತಿಯಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಸಂಬಂಧ ಬೆಳಸಲು ಅಸಾಧ್ಯ ಎಂದು ಠಾಕೂರ್‌ಹೇಳಿದರು.





