ಮೂರು ಒಪ್ಪಂದಗಳಿಗೆ ಭಾರತ-ಸಿಂಗಾಪುರ ಸಹಿ

ಹೊಸದಿಲ್ಲಿ, ಅ.4: ಪ್ರಧಾನಿ ನರೇಂದ್ರ ಮೋದಿ ಹಾಗೂ ದಿಲ್ಲಿಗೆ ಭೇಟಿ ನೀಡಿರುವ ಸಿಂಗಾಪುರದ ಪ್ರಧಾನಿ ಲೀ ಹ್ಸೀನ್ ಲೂಂಗ್ ನೇತೃತ್ವದ ನಿಯೋಗಗಳ ಮಟ್ಟದ ಮಾತುಕತೆಯ ಬಳಿಕ, ಉಭಯ ದೇಶಗಳು ಮಂಗಳವಾರ ಮೂರು ಒಪ್ಪಂದಗಳಿಗೆ ಸಹಿ ಹಾಕಿವೆ. ಅವುಗಳಲ್ಲಿ 2 ಒಪ್ಪಂದಗಳು ಕೌಶಲಾಭಿವೃದ್ಧಿ ಕ್ಷೇತ್ರಕ್ಕೆ ಸಂಬಂಧಿಸಿದವುಗಳಾಗಿವೆ.
ವ್ಯೆಹಾತ್ಮಕ ಭಾಗಿದಾರಿಕೆಯ ಬಲವರ್ಧನೆಗೆ ಒಪ್ಪಿಕೊಂಡಿರುವ ಉಭಯ ನಾಯಕರು ಕೌಶಲಾಭಿವೃದ್ಧಿ ಹಾಗೂ ಕೈಗಾರಿಕಾ ಆಸ್ತಿಗಳಿಗೆ ಸಂಬಂಧಿಸಿದ 3 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟಿಸಿದ್ದಾರೆ.
ಸಿಂಗಾಪುರದ ತಾಂತ್ರಿಕ ಶಿಕ್ಷಣ ಸಂಸ್ಥೆ(ಐಟಿಇ) ಶಿಕ್ಷಣ ಸೇವೆಗಳು(ಐಟಿಇಇಎಸ್) ಹಾಗೂ ಭಾರತದ ಕೌಶಲಾಭಿವೃದ್ಧಿ ನಿಗಮಗಳು ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣ ಮತ್ತು ತರಬೇತಿಯ ಸಂಬಂಧ ತಿಳುವಳಿಕೆ ಪತ್ರವೊಂದಕ್ಕೆ ಸಹಿ ಹಾಕಿವೆ. ಇದೇ ಕುರಿತಾದ ಇನ್ನೊಂದು ತಿಳುವಳಿಕೆ ಪತ್ರಕ್ಕೆ ಅಸ್ಸಾಂ ಸರಕಾರ ಹಾಗೂ ಐಟಿಇಇಎಸ್ ಸಹಿ ಹಾಕಿವೆ.
ಮೂರನೆಯ ಒಪ್ಪಂದವು ಕೈಗಾರಿಕಾ ಆಸ್ತಿ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದೆ. ಸಿಂಗಾಪುರದ ಪ್ರಧಾನಿ ಉನ್ನತ ನಿಯೋಗವೊಂದರ ಜೊತೆ ಸೋಮವಾರ ಐದು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿದ್ದಾರೆ.







