ಅ.7ರಿಂದ 18ರವರೆಗೆ ತಮಿಳುನಾಡಿಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಹರಿಸಿ
ಮೆದುವಾದ ಸುಪ್ರೀಂ ಕೋರ್ಟ್

♦ ವಸ್ತುಸ್ಥಿತಿ ಅಧ್ಯಯನಕ್ಕೆ ತಾಂತಿ್ರಕ ಸಮಿತಿ ರಚನೆ ♦ ಅಕ್ಟೋಬರ್ 17ರೊಳಗೆ ಸಮಿತಿಯ ವರದಿ ಸಲ್ಲಿಸಲು ಆದೇಶ ♦ ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಗೆ ತಡೆ
ಹೊಸದಿಲ್ಲಿ, ಅ.4: ಕಾವೇರಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ಸರಣಿ ಹಿನ್ನಡೆಯನ್ನು ಅನುಭವಿ ಸುತ್ತಾ ಬಂದಿದ್ದ ಕರ್ನಾಟಕವು ಮಂಗಳವಾರ ತುಸು ಸಮಾಧಾನದ ನಿಟ್ಟುಸಿರೆಳೆಯುವಂತಾಗಿದೆ.
ಕಾವೇರಿ ನೀರಿನ ಹಂಚಿಕೆಗೆ ನಿರ್ವಹಣಾ ಮಂಡಳಿಯೊಂದನ್ನು ರಚಿಸಬೇಕೆಂಬ ತನ್ನ ಹಿಂದಿನ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು ತಡೆಹಿಡಿದಿದೆ ಹಾಗೂ ವಸ್ತುಸ್ಥಿತಿಯ ಅಧ್ಯಯ ನಕ್ಕಾಗಿ ಕಾವೇರಿ ಕಣಿವೆಗೆ ‘ತಾಂತ್ರಿಕ ತಂಡ’ವೊಂದನ್ನು ಕಳುಹಿಸಬೇಕೆಂಬ ಕೇಂದ್ರ ಸರಕಾರದ ಸಲಹೆಗೆ ಹಸಿರು ನಿಶಾನೆ ತೋರಿಸಿದೆ.
ಇದೇ ವೇಳೆ ತಾತ್ಕಾಲಿಕ ಕ್ರಮ ವಾಗಿ ಕರ್ನಾಟಕವು ಅಕ್ಟೋಬರ್ 7ರಿಂದ 18ರವರೆಗೆ ತಮಿಳುನಾಡಿಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸುವಂತೆ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿದೆ.
ಸುಪ್ರೀಂಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ತಾಂತ್ರಿಕ ತಂಡವು ಕರ್ನಾಟಕ, ತಮಿಳು ನಾಡು, ಪುದುಚೇರಿ ಹಾಗೂ ಕೇರಳ ರಾಜ್ಯಗಳ ಪ್ರತಿನಿಧಿಗಳ ಜೊತೆ ಕಾವೇರಿ ಜಲಾನಯನ ಪ್ರದೇಶಕ್ಕೆ ಭೇಟಿ ನೀಡಲಿದೆ ಹಾಗೂ ಅಕ್ಟೋಬರ್ 17ರೊಳಗೆ ಸುಪ್ರೀಂಕೋರ್ಟ್‌ಗೆ ವರದಿಯೊಂದನ್ನು ಸಲ್ಲಿಸಲಿದೆ.
ತಾಂತ್ರಿಕ ತಂಡದ ಭೇಟಿಯಿಂದ ಕಾವೇರಿ ವಿವಾದಕ್ಕೆ ಯಾವುದೇ ಸಮಾಧಾನಕರ ಪರಿಹಾರ ದೊರೆಯುವ ಸಾಧ್ಯತೆಯ ಬಗ್ಗೆ ತಮಿಳುನಾಡು ಸರಕಾರ ಸಂದೇಹ ವ್ಯಕ್ತಪಡಿಸಿದೆ. ಕೇಂದ್ರ ಸರಕಾರವು ಕರ್ನಾಟಕ ಸರಕಾರದ ಕೈಗೊಂಬೆಯಾಗಿದ್ದು, ತಮಿಳುನಾಡಿನ ಜನತೆಗೆ ಅವರ ಪಾಲಿನ ಕಾವೇರಿ ನೀರನ್ನು ನಿರಾಕರಿಸುತ್ತಿದೆಯೆಂದು ಅದು ಆಪಾದಿಸಿದೆ.
ಕರ್ನಾಟಕದ ಪರವಾಗಿ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್ ಇಂದು ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುತ್ತಾ, ‘‘ಮಾನ್ಯ ನ್ಯಾಯಮೂರ್ತಿಗಳು ಯಾವ ಆಧಾರದಲ್ಲಿ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ ನೀಡಿ, 15 ಸಾವಿರ ಕ್ಯೂಸೆಕ್ ನೀಡಿ ಹಾಗೂ 6 ಸಾವಿರ ಕ್ಯೂಸೆಕ್ ನೀಡಿ ಎಂದು ಆದೇಶಿಸಿದ್ದಾರೆ?’’ ಎಂದು ಪ್ರಶ್ನಿಸಿದರು.
ಆಗ ನ್ಯಾಯಮೂರ್ತಿ ಮಿಶ್ರಾ, ನಾವು ಗಣಿತದ ಲೆಕ್ಕಾಚಾರವನ್ನ್ನು ಆಧರಿಸಿ ಈ ಆದೇಶಗಳನ್ನು ನೀಡಿದ್ದೆವು ಎಂದು ಉತ್ತರಿಸಿದರು. ಆಗ ನಾರಿಮನ್, ನ್ಯಾಯ ಪೀಠವು ವಸ್ತುಸ್ಥಿತಿಯನ್ನು ಆಧರಿಸಿ ಆದೇಶವನ್ನು ನೀಡಬೇಕೇ ಹೊರತು ಲೆಕ್ಕಾಚಾರದ ಆಧಾರದಲ್ಲಲ್ಲವೆಂದರು.
ಕೇಂದ್ರ ಸರಕಾರದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ನ್ಯಾಯಾಲಯಕ್ಕೆ ಮನವಿ ಮಾಡುತ್ತಾ, ಕಾವೇರಿ ಜಲ ನಿರ್ವಹಣಾ ಮಂಡಳಿಯನ್ನು ರಚಿಸಬೇಕೆಂಬ ಸೆಪ್ಟಂಬರ್ 30ರ ಆದೇಶವನ್ನು ಅನುಸರಿಸಲು ಸಾಧ್ಯವಾಗದೆಂದು ಹೇಳಿದರು. ಕಾವೇರಿ ಜಲ ವಿವಾದ ನ್ಯಾಯಾಧಿಕರಣವು 2007ರಲ್ಲಿ ನೀಡಿದ ಅಂತಿಮ ಆದೇಶದಲ್ಲಿ ಜಲ ನಿರ್ವಹಣಾ ಮಂಡಳಿಯ ರಚನೆಗೆ ಶಿಫಾರಸು ಮಾಡಿತ್ತು. ನ್ಯಾಯಾಧಿಕರಣದ ಅಂತಿಮ ತೀರ್ಪನ್ನು ಈಗಾಗಲೇ ರಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿವೆ. ಈ ಅರ್ಜಿಗಳು ಇತ್ಯರ್ಥಗೊಳ್ಳುವವರೆಗೂ ಜಲ ನಿರ್ವಹಣಾ ಮಂಡಳಿಯ ರಚನೆಯನ್ನು ಮುಂದೂಡಬೇಕೆಂದು ರೋಹಟಗಿ ನ್ಯಾಯಪೀಠವನ್ನು ಕೋರಿದರು.ಇದಕ್ಕೆ ಸಮ್ಮತಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 18ಕ್ಕೆ ನಿಗದಿಪಡಿಸಿತು.
ಇಂದು ವಿಚಾರಣೆಯ ಆರಂಭದಲ್ಲಿ ನ್ಯಾಯ ಪೀಠವು ಕಾವೇರಿ ಕೊಳ್ಳ ಪ್ರದೇಶಕ್ಕೆ ಮೇಲುಸ್ತುವಾರಿ ಸಮಿತಿಯನ್ನು ಕಳುಹಿಸುವ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಆದರೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಯದರ್ಶಿಗಳನ್ನೊಳಗೊಂಡ ಸಮಿತಿಗೆ ತಂತ್ರಜ್ಞರ ಸಹಕಾರದ ಅಗತ್ಯವಿರುತ್ತದೆ. ಹೀಗಾಗಿ ಅಲ್ಲಿಗೆ ಪ್ರತ್ಯೇಕವಾದ ತಾಂತ್ರಿಕ ತಂಡವೊಂದನ್ನು ಕಳುಹಿಸಬೇಕೆಂದು ರೋಹಟಗಿ ಸಲಹೆ ನೀಡಿದರು. ಆಗ ನ್ಯಾಯ ಪೀಠ ತನ್ನ ನಿಲುವಿನಿಂದ ಹಿಂದೆ ಸರಿದು ತಾಂತ್ರಿಕ ಸಮಿತಿಯ ರಚನೆಗೆ ಸಮ್ಮತಿಸಿತು. ತಮಿಳುನಾಡು ಸರಕಾರದ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಶೇಖರ್ ನಾಫಡೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನೀರಿನ ಕೊರತೆಯ ಆಧಾರದಲ್ಲಿ 2007ರಲ್ಲಿ ನ್ಯಾಯಾಧಿಕರಣವು ತೀರ್ಪು ನೀಡಿರುವಾಗ, ತಾಂತ್ರಿಕ ತಂಡವನ್ನು ಕಾವೇರಿ ಕೊಳ್ಳದ ಪ್ರದೇಶಕ್ಕೆ ಪರಿಶೀಲನೆಗೆ ಕಳುಹಿಸುವುದರಲ್ಲಿ ಯಾವ ಅರ್ಥವಿದೆಯೆಂದು ಪ್ರಶ್ನಿಸಿದರು.
‘‘ಈಗ ನ್ಯಾಯಾಲಯದ ಮುಂದಿರುವುದು ಕಾನೂನಿನ ಪ್ರಭುತ್ವದ ಕುರಿತ ಪ್ರಶ್ನೆಯಾಗಿದೆ. ಕರ್ನಾಟಕ ಸರಕಾರವು ನ್ಯಾಯಾಲಯದ ಆದೇಶವನ್ನು ಲಘುವಾಗಿ ತೆಗೆದುಕೊಂಡಿದೆ ಹಾಗೂ ತಾನೊಬ್ಬ ಸಂತ್ರಸ್ತನೆಂದು ನಾಟಕವಾಡುತ್ತಿದೆ’’ ಎಂದು ನಾಫಡೆ ಟೀಕಿಸಿದರು.
ಸುಪ್ರೀಂ ಕೋರ್ಟ್‌ನ ಆದೇಶಕ್ಕನುಗುಣವಾಗಿ ತಾನು ಸೆಪ್ಟಂಬರ್ 5ರಿಂದ 30ರವರೆಗೆ 17.5 ಟಿಎಂಸಿ ನೀರನ್ನು ಬಿಡುಗಡೆಗೊಳಿಸಿದ್ದೇನೆಂಬ ಕರ್ನಾಟಕದ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡಿನ ವಕೀಲರು, ಈ ಅವಧಿಯಲ್ಲಿ ಕರ್ನಾಟಕವು ಕೇವಲ 16.9 ಟಿಎಂಸಿ ನೀರನ್ನು ಬಿಡುಗಡೆಗೊಳಿಸಿದೆಯೆಂದು ಪ್ರತಿಪಾದಿಸಿದರು.
ಆಗ ನ್ಯಾಯ ಪೀಠವು, ಅಕ್ಟೋಬರ್‌ನಲ್ಲಿ ಕರ್ನಾಟಕವು 22 ಟಿಎಂಸಿ ನೀರನ್ನು ಬಿಡುಗಡೆಗೊಳಿಸುವ ಮೂಲಕ ಹಿಂದಿನ 12 ಟಿಎಂಸಿ ನೀರಿನ ಕೊರತೆಯನ್ನು ಭರ್ತಿ ಮಾಡಬೇಕೆಂದು ಹೇಳಿತು. ಅದಕ್ಕೆ ಕರ್ನಾಟಕವು, ಅಕ್ಟೋಬರ್ 6ರವರೆಗೆ ತಾನು 3.1 ಟಿಎಂಸಿ ನೀರನ್ನು ಬಿಡುಗಡೆಗೊಳಿಸುವ ಉದ್ದೇಶವನ್ನು ಹೊಂದಿದ್ದೇನೆಂದು ನ್ಯಾಯ ಪೀಠಕ್ಕೆ ತಿಳಿಸಿತು.
ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಸೈಯದ್ ಮಸೂದ್
ಕಾವೇರಿ ಮೇಲುಸ್ತುವಾರಿ ಸಮಿತಿಯ ಹಾಲಿ ಅಧ್ಯಕ್ಷ ಶಶಿಶೇಖರ್ ರನ್ನು ಮಂಗಳವಾರ ಹುದ್ದೆಯಿಂದ ತೆರವುಗೊಳಿಸಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠವು ಅವರ ಸ್ಥಾನದಲ್ಲಿ ಕೇಂದ್ರ ಜಲ ಆಯೋಗದ ಸದಸ್ಯ ಸೈಯದ್ ಮಸೂದ್ ಅವರನ್ನು ನೇಮಿಸಿದೆ.
ನಾರಿಮನ್ ಮನವೊಲಿಕೆ ಸಫಲ
ಬೆಂಗಳೂರು, ಅ.4: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ರಿಂದ ಮನವೊಲಿಕೆಯ ಫಲವಾಗಿ, ವಾದ ಮಂಡನೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ನಾರಿಮನ್ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಗೆ ಹಾಜರಾಗಿ ವಾದ ಮಂಡಿಸಿದ್ದಾರೆ.
ನಾರಿಮನ್‌ರ ಜೊತೆ ದೂರವಾಣಿಯ ಮೂಲಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಪರವಾಗಿ ವಾದ ಮಂಡಿಸುವ ವಿಚಾರದಲ್ಲಿ ಹಿಂದಕ್ಕೆ ಸರಿಯಬಾರದು. ಸರಕಾರಕ್ಕೆ ನಿಮ್ಮ ಮೇಲೆ ವಿಶ್ವಾಸವಿದ್ದು, ನಿಮಗೆ ಎಲ್ಲ ರೀತಿಯ ನೆರವನ್ನು ನೀಡಲಾಗುವುದು. ಯಾವುದೇ ಕಾರಣಕ್ಕೂ ವಾದ ಮಂಡನೆಯಿಂದ ಹಿಂದಕ್ಕೆ ಸರಿಯಬಾರದು ಎಂದು ಮನವಿ ಮಾಡಿದ್ದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಕ್ಕೆ ಪದೇ ಪದೇ ಹಿನ್ನಡೆಯುಂಟಾಗಿದ್ದರಿಂದ ಬಿಜೆಪಿ ನಾಯಕರು ಕಾನೂನು ತಂಡದ ಕುರಿತು ನೀಡಿದ ಹೇಳಿಕೆಗಳಿಂದಾಗಿ ರಾಜ್ಯದ ಪರ ವಕೀಲ ನಾರಿಮನ್ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
ಅಲ್ಲದೆ, ರಾಜ್ಯದ ಬಿಜೆಪಿ ನಾಯಕರು ತನ್ನ ಕ್ಷಮೆಯಾಚಿಸುವವರೆಗೂ ಕಾವೇರಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದವನ್ನು ಮಂಡಿಸುವುದಿಲ್ಲ ಎಂದು ರಾಜ್ಯ ಸರಕಾರಕ್ಕೆ ನಾರಿಮನ್ ಖಡಕ್ ಆಗಿ ಉತ್ತರಿಸಿದ್ದರು ಎಂದು ತಿಳಿದು ಬಂದಿದೆ.







