'ಜಿಹಾದಿ ಉಗ್ರರನ್ನು' ಹೊಗಳಿ ಕರಪತ್ರ ಹಂಚಿದ್ದು ಸನಾತನ ಸಂಸ್ಥೆ !

ಪುಣೆ, ಅ.5: ಕೊಲ್ಲಾಪುರದ ಹಿಂದೂ ದೇವಳಗಳಲ್ಲಿ ‘ಕಾಶ್ಮೀರದ ಜಿಹಾದಿ ಉಗ್ರವಾದಿಯೊಬ್ಬನನ್ನು ವೈಭವೀಕರಿಸಿ ಸನಾತನ ಸಂಸ್ಥೆ ವಿತರಿಸಿದ ಕರಪತ್ರಗಳಿಂದ 2006ರಲ್ಲಿ ಹಿಂಸಾತ್ಮಕ ವಾತಾವರಣ ಸೃಷ್ಟಿಯಾಗಿತ್ತು ಎಂದು ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.
ಸನಾತನ ಸಂಸ್ಥಾದ ಡಾ. ವೀರೇಂದ್ರ ತಾವ್ಡೆ ಅವರನ್ನು ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಸಿಬಿಐ ಜೂನ್ 10 ರಂದು ಬಂಧಿಸಿತ್ತು. ಈ ಪ್ರಕರಣದಲ್ಲಿ ತಾವ್ಡೆ ಹೊರತು ಪಡಿಸಿ ಸನಾತನ ಸಂಸ್ಥೆಯ ವಿನಯ್ ಪವಾರ್, ಸಾರಂಗ್ ಅಕೋಲ್ಕರ್ ಅವರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಿತ್ತು. ಅವರಿಬ್ಬರು ಇನ್ನೂ ಪತ್ತೆಯಾಗಿಲ್ಲ.
‘‘ಜೂನ್ 2006 ರಲ್ಲಿ ಜಿಹಾದಿ ಉಗ್ರ, ಕೊಲ್ಹಾಪುರ ನಿವಾಸಿಯಾಗಿರುವ ಇರ್ಫಾನ್ ಅತ್ತರ್ ಎಂಬವನನ್ನು ಎನ್ ಕೌಂಟರ್ ಒಂದರಲ್ಲಿ ಸಾಯಿಸಿದ್ದಾಗ ಕೊಲ್ಹಾಪುರದಲ್ಲಿ ಯಾವುದೇ ಪ್ರತಿಕ್ರಿಯೆಯಿಲ್ಲದಿರುವುದನ್ನು ನೋಡಿ ಅಲ್ಲಿನ ಸನಾತನ ಸಂಸ್ಥೆಯ ಕಾರ್ಯಕರ್ತರು ‘ಇರ್ಫಾನ್ ಅಮರ್ ರಹೇ’ ಎಂಬ ಕರಪತ್ರ ಮುದ್ರಿಸಿ ಹಿಂದೂ ದೇವಳಗಳಲ್ಲಿ ವಿತರಿಸಿ ಹಿಂದೂಗಳನ್ನು ಪ್ರಚೋದಿಸಲು ನಿರ್ಧರಿಸಿ ಅಂತೆಯೇ ಮಾಡಿದಾಗ ಹಿಂಸಾತ್ಮಕ ವಾತಾವರಣ ಸೃಷ್ಟಿಯಾಗಿತ್ತು’’ ಎಂದು ಚಾರ್ಜ್ ಶೀಟ್ ಹೇಳಿದೆ.
ಪವಾರ್ ಹಾಗೂ ಅಕೋಲ್ಕರ್ ಜೊತೆಯಾಗಿ ದಾಭೋಲ್ಕರ್ ಅವರನ್ನು ಪುಣೆಯ ಓಂಕಾರೇಶ್ವರ ಸೇತುವೆ ಸಮೀಪ ಆಗಸ್ಟ್ 20, 2013 ರಂದು ಗುಂಡಿಟ್ಟು ಸಾಯಿಸಿದ್ದರು ಎಂಬ ಆರೋಪವಿದೆ.
ದಾಭೋಲ್ಕರ್ ಹಿಂದೂ ವಿರೋಧಿಯಾಗಿದ್ದರು ಹಾಗೂ ಮಹಾರಾಷ್ಟ್ರ ಸರಕಾರ ಜಾರಿಗೆ ತಂದಿದ್ದ ಅಂಧಶ್ರದ್ಧೆ ವಿರೋಧಿ ಕಾಯ್ದೆ ಜಾರಿಗೆ ಕಾರಣರು ಎಂದು ಸನಾತನ ಸಂಸ್ಥೆ ನಂಬಿತ್ತು ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. ಪನ್ಸಾರೆ ನೇತೃತ್ವದಲ್ಲಿ ಕಮ್ಯೂನಿಸ್ಟ್ ಪಕ್ಷ ಕೊಲ್ಹಾಪುರದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ರ್ಯಾಲಿಯೊಂದನ್ನು ವಿರೋಧಿಸಲು ತಾವ್ಡೆ ಯೋಚಿಸಿದ್ದರು ಎಂಬುದನ್ನೂ ಅಲ್ಲಿ ನಮೂದಿಸಲಾಗಿದೆ. ಆಗಸ್ಟ್ 18, 2014 ರಂದು ಸನಾತನ ಪ್ರಭಾತ್ ಪ್ರಕಟಿಸಿದ್ದ ಪ್ರಚೋದನಕಾರಿ ಲೇಖನದ ಬಗ್ಗೆಯೂ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ತಾವ್ಡೆಯನ್ನು ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲೂ ಬಂಧಿಸಲಾಗಿತ್ತು.







