ಉಡುಪಿ ಚಲೋ ಜಾಥಾ ಅ.6ರಂದು ಹಾಸನ ನಗರಕ್ಕೆ

ಹಾಸನ, ಅ.5: ಜಾತಿವಾದ ಮತ್ತು ಕೋಮುದ್ವೇಷದ ಉದ್ವಿಗ್ನತೆ ನಡುವೆ, ಜನ ಹೋರಾಟಗಳ ನಿರಾಶದಾಯಕ ಸ್ಥಿತಿಯ ಮಧ್ಯೆ, ಒಡೆದ ಜಾತಿಗಳ ಒಗ್ಗೂಡಿಸುವ ಧ್ಯೇಯದಲ್ಲಿ ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು ಘೋಷಣೆಯ ಉಡುಪಿ ಚಲೋ ಜಾಥಾ ಅ.6ರಂದು ನಗರಕ್ಕೆ ಆಗಮಿಸಲಿದ್ದು, ಬೆಳಗ್ಗೆ 11 ಘಂಟೆಗೆ ಹೇಮಾವತಿ ಪ್ರತಿಮೆಯ ಬಳಿ ಬಹಿರಂಗ ಸಭೆ ನಡೆಯಲಿದೆ.
ರಾಜ್ಯಾದ್ಯಂತ ಉಡುಪಿ ಚಲೋಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಅ.9ರಂದು ಉಡುಪಿಯಲ್ಲಿ ಜರಗಲಿರುವ ದಲಿತ ದಮನಿತರ ಸಮಾವೇಶದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿ-ಯುವಜನರು ಸೇರುವ ನಿರೀಕ್ಷೆಯಿದೆ. ಸಾಮಾನ್ಯ ಜನರ ಆಹಾರದ ಆಯ್ಕೆ ಮತ್ತವರ ಬದುಕಿನ ಮೇಲೆ ಸಂಘ ಪರಿವಾರ ಹೊಸ ರೂಪದ ಫ್ಯಾಸಿಶ್ಟ್ ದಾಳಿ ಆರಂಭಿಸಿದೆ. ಅದಕ್ಕೆ ಹೋರಾಟದ ಮೂಲಕ ಸೂಕ್ತ ತಿರುಗೇಟು ನೀಡಲು ದಲಿತ-ದಮನಿತರ ಪಡೆಯೊಂದನ್ನು ಸನ್ನದ್ಧಗೊಳ್ಳುತ್ತಿದೆ. ಉನಾದಿಂದ ಉಡುಪಿಯವರೆಗೆ ಅದು ವ್ಯಾಪಿಸಿದೆ.
ಹುಸಿ ದೇಶಪ್ರೇಮದ ಹೆಸರಿನಲ್ಲಿ ಕೇಸರಿ ಉನ್ಮತ್ತತೆಯನ್ನು ಸೃಷ್ಟಿಸಲು ಹೊರಟಿರುವ ಸಂಘಪರಿವಾರಕ್ಕೆ ಉಡುಪಿ ಚಲೋ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತತ್ವಗಳ ನೆಲೆಯಲ್ಲಿ ಭೀಮಶಕ್ತಿ ಮತ್ತು ಬಹುಜನರ ನೀಲಿಬಣ್ಣದ ಮೂಲಕ ತಿರುಗೇಟು ನೀಡಲಿದೆ. ಅ.5ರಂದು ಕುಣಿಗಲ್, ಚನ್ನರಾಯಪಟ್ಟಣ, ಹೊಳೆನರಸೀಪುರ, ಅ.6ಕ್ಕೆ ಹಾಸನ- ಬೇಲೂರು, ಅ.7ಕ್ಕೆ ಚಿಕ್ಕಮಗಳೂರು ಮಾರ್ಗವಾಗಿ ಕೊಪ್ಪ ತಾಲೂಕಿನ ಜಯಪುರದಲ್ಲಿ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆ ನಡೆಸಲಿದೆ. ಅ.9ರಂದು ಉಡುಪಿಯಲ್ಲಿ ದಲಿತ ದಮನಿತರ ಬೃಹತ್ ಸಮಾವೇಶ ಜರಗಲಿದೆ.
ರಾಷ್ಟ್ರೀಯತೆ ಮತ್ತು ದನದ ಹೆಸರಿನಲ್ಲಿ ದ್ವೇಷದ ಕಿಚ್ಚು ಹಚ್ಚುವ ಸಂಘ ಪರಿವಾರದ ಫ್ಯಾಸಿಸ್ಟ್ ಶಕ್ತಿಗಳಿಗೆ ಎಚ್ಚರಿಕೆಯನ್ನು ನೀಡಲು ಉಡುಪಿ ಚಲೋ ಹಮ್ಮಿಕೊಳ್ಳಲಾಗಿದೆ. ಯುವ ಸಮೂಹದ ನೇತೃತ್ವದಲ್ಲಿನ ದಮನಿತರ ಸ್ವಾಭಿಮಾನಿ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಿ, ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸುವ ಉದ್ದೇಶವಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವಂತೆ ವಿವಿಧ ಸಂಘಟನೆಗಳ ಮುಖಂಡರಾದ ಅಬ್ದುಲ್ ಸಮದ್, ಎಸ್ ಎನ್ ಮಲ್ಲಪ್ಪ, ದರ್ಮೆಶ್, ಪೃಥ್ವಿ, ಮುಬಶೀರ್, ಮುಂತಾದವರು ವಿನಂತಿಸಿದ್ದಾರೆ.







