ಬಂಟ್ವಾಳ ತಾ.ಪಂ.ನ ಹಲವು ಅಮೂಲ್ಯ ಕಡತಗಳು ನಾಶ
ದಾಖಲೆ ಪತ್ರಗಳ ದಾಸ್ತಾನು ಕೊಠಡಿಗೆ ನುಗ್ಗಿದ ನೀರು

ಬಂಟ್ವಾಳ, ಅ. 5: ತಾಲೂಕು ಕಚೇರಿಯ ದಾಖಲೆ ಪತ್ರಗಳ ದಾಸ್ತಾನು ಇರಿಸಿದ್ದ ಕೊಠಡಿಗೆ ದಿಢೀರನೆ ನೀರು ನುಗ್ಗಿದ ಪರಿಣಾಮ ಹಲವು ಅಮೂಲ್ಯ, ಹಳೆ ಕಡತಗಳು ಒದ್ದೆಯಾಗಿ ನಾಶಗೊಂಡಿದೆ.
ಬಿ.ಸಿ.ರೋಡಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಹಳೆ ತಾಲೂಕು ಕಚೇರಿ ಕಟ್ಟಡವನ್ನು ಕೆಡವಲಾಗಿತ್ತಾದರೂ ಇದರ ಪಕ್ಕದಲ್ಲೇ ಇದ್ದ ಹಳೆ ಕಡತಗಳ ಹಾಗೂ ದಾಖಲೆಪತ್ರಗಳ ದಾಸ್ತಾನು ಕೊಠಡಿಯನ್ನು ಹಾಗೇ ಉಳಿಸಿಕೊಳ್ಳಲಾಗಿತ್ತು. ಈ ಕಟ್ಟಡದಲ್ಲಿ ಹಳೆ ಕಡತಗಳನ್ನು ಯಥಾವತ್ತಾಗಿ ಜೋಡಿಸಿಡಲಾಗಿದೆ.
ದಾಸ್ತಾನು ಕೊಠಡಿಗೆ ತಾಗಿಕೊಂಡೇ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣವಾಗುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿಗಾಗಿ ಮಿನಿ ವಿಧಾನ ಸೌಧದ ಮೇಲ್ಭಾಗದಲ್ಲಿ ನೀರಿನ ಟ್ಯಾಂಕನ್ನು ಇರಿಸಲಾಗಿದೆ. ಮಂಗಳವಾರ ರಾತ್ರಿ ಮಿನಿ ವಿಧಾನ ಸೌಧದ ಮೇಲಂತಸ್ತಿನಲ್ಲಿ ಕಾಂಕ್ರೀಟೀಕರಣ ಕಾಮಗಾರಿಯು ನಡೆದಿದ್ದು ಈ ವೇಳೆ ಟ್ಯಾಂಕ್‌ಗೆ ನೀರು ಬಿಡಲಾಗಿತ್ತು. ನೀರು ಟ್ಯಾಂಕಿಯನ್ನು ತುಂಬಿ ಹೊರಹರಿದುದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ಟ್ಯಾಂಕ್‌ನಿಂದ ಹೊರ ಹರಿದ ನೀರು ಪಕ್ಕದ ಚರಂಡಿಯಲ್ಲಿ ತುಂಬಿ ಚರಂಡಿಗೆ ತಾಗಿಕೊಂಡೇ ಇರುವ ತಾಲೂಕು ಕಚೇರಿಯ ಕಡತಗಳ ದಾಸ್ತಾನು ಕೊಠಡಿಯೊಳಗೆ ನೀರು ನುಗ್ಗಿದೆ. ಬೆಳಗ್ಗೆ ತಾಲೂಕು ಕಚೇರಿಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಕೊಠಡಿಯ ಬೀಗ ತೆರೆದಾಗ ಕೆಲಭಾಗದಲ್ಲಿ ಜೋಡಿಸಲಾಗಿದ್ದ ಕಡತಗಳನ್ನು ಆವರಿಸಿದ್ದು ಹಲವು ಅಮೂಲ್ಯ ಕಡತಗಳು ಒದ್ದೆಯಾಗಿ ಹಾನಿಗೊಂಡಿದೆ. ತಕ್ಷಣ ಮಿನಿ ವಿಧಾನ ಸೌಧದ ನಿರ್ಮಾಣ ಕಾರ್ಯದಲ್ಲಿ ನಿರತರಾದ ಕಾರ್ಮಿಕರು ಚರಂಡಿಯಲ್ಲಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದರು. ಆದರೆ ಕೊಠಡಿಯೊಳಗೆ ನುಗ್ಗಿರುವ ನೀರು ಹಾಗೆಯೇ ಉಳಿದುಕೊಂಡಿದೆ.







