ಅ. 7ರಂದು ಎಂಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ

ಮಂಗಳೂರು, ಅ.5: ಡಿಸೆಂಬರ್ 17ರಿಂದ 30ರವರೆಗೆ ನವಮಂಗಳೂರು ಬಂದರು ಪಣಂಬೂರಿನ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡೆಮಿ ಆಯೋಜಿಸಲಿರುವ ಅಲ್ ಮುಝೈನ್ ವೈಟ್‌ಸ್ಟೋನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಕೂಟದ ಆಟಗಾರರ ಆಯ್ಕೆಯ ಹರಾಜು ಪ್ರಕ್ರಿಯೆ ಅ. 7ರಂದು ನಡೆಯಲಿದೆ. ಪಾಂಡೇಶ್ವರ ಫೋರಂ ಫಿಝಾ ಮಾಲ್‌ನ ಎರಡನೆ ಮಹಡಿಯಲ್ಲಿ ಅಪರಾಹ್ನ 2:30ರಿಂದ ಈ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಾಲಕೃಷ್ಣ ಮುಗ್ರೋಡಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಐಪಿಎಲ್ ಕ್ರಿಕೆಟ್ ಹರಾಜು ಪ್ರಕ್ರಿಯೆ ಮಾದರಿಯಲ್ಲಿಯೇ ಈ ಹರಾಜು ನಡೆಯಲಿದೆ. ಎಂಪಿಎಲ್‌ನಲ್ಲಿ ಬಾಗವಹಿಸುವ ಎಲ್ಲಾ 12 ತಂಡಗಳ ಮಾಲಕರು, ತರಬೇತುದಾರರು, ಅಭಿಮಾನಿಗಳು ಭಾಗವಹಿಸುವರು. ಈ ಬಾರಿ ಎಲ್ಲಾ ತಂಡಗಳ ಪ್ರೋತ್ಸಾಹ ವರ್ಗಕ್ಕೆ ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ಹರಾಜು ಪ್ರಕ್ರಿಯೆಯನ್ನು ವೀಕ್ಷಿಸುವ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ತಂಡವು ಆಟಗಾರರನ್ನು ಖರೀದಿಸಲು 2,50,000 ರೂ.ಗಳನ್ನು ನಿಗದಿಪಡಿಸಿದ್ದು, ವಿವಿಧ ವಿಭಾಗಗಳ ಆಟಗಾರರನ್ನು ಖರೀದಿಸಲು ಹಣವನ್ನು ವಿಂಗಡಿಸಲಾಗಿದೆ. ಪ್ರತಿಯೊಂದು ತಂಡವು ಕನಿಷ್ಠ 16 ಮತ್ತು ಗರಿಷ್ಠ 21 ಮಂದಿ ಆಟಗಾರರನ್ನು ಹೊಂದುವ ಅವಕಾಶವಿದೆ. ಎಲ್ಲ ತಂಡಗಳ ಮಾಲಕರಿಗೆ ಅವರದೇ ಆಯ್ಕೆಯ ಒಬ್ಬೊಬ್ಬ ಆಟಗಾರನನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದರು.
ನಿಶಿತ್‌ರಾಜ್, ಕಾರ್ತಿಕ್ ಸಿಎ, ಕೆ.ಸಿ. ಕಾರ್ಯಪ್ಪ, ನಿತಿನ್ ಮುಲ್ಕಿ, ಮುಹಮ್ಮದ್ ಯಾಸಿರ್, ಸಂದೀಪ್ ಭಂಡಾರಿ, ಅಕ್ಷಯ್ ಬಲ್ಲಾಳ್, ಆಸಿಫ್ ಮುಹಮ್ಮದ್, ಸಾದಿಕ್ ಎನ್.ಎಂ., ಭರತ್ ಧೂರಿ, ನಿಹಾಲ್ ಉಳ್ಳಾಲ್ ಮತ್ತು ಆದಿತ್ಯ ಸೋಮಣ್ಣ ಈ ಆಟಗಾರರನ್ನು ಈಗಾಗಲೇ ತಂಡಗಳು ಆಯ್ಕೆ ಮಾಡಿಕೊಂಡಿವೆ. ದಿಕ್ಸೂಚಿ (ಐಕಾನ್ ) ವಿಭಾಗದಲ್ಲಿ ರಾಜ್ಯದ ಶ್ರೇಷ್ಠ ಆಟಗಾರರನ್ನು ಅವರ ಹಿಂದಿನ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಕೆಪಿಎಲ್ ಪಂದ್ಯಾಕೂಟದಲ್ಲಿನ ಅವರ ಪ್ರದರ್ಶನವನ್ನು ಪರಿಗಣಿಸಿ 34 ಮಂದಿ ಆಟಗಾರರನ್ನು ಪಟ್ಟಿ ಮಾಡಲಾಗಿದೆ. ಪ್ರತಿಯೊಂದು ತಂಡವು ಇಬ್ಬರು ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶವಿದೆ. ಪವನ್ ದೇಶಪಾಂಡೆ, ಸೈಯದ್ ಕಿರ್ಮಾನಿ, ಅರ್ಜುನ್ ಹೊಯ್ಸಳ, ಅಬ್ಬಾಸ್, ಗೌತಮ್ ಕೆ., ತಾಹಾ, ರೋಹನ್ ಕದಂ, ಭರತ್, ದುಬೇ, ಅನಿರುದ್ದ್ ಜೋಶಿ, ನವೀನ್ ಏಂಜಿ, ಕಿಶೋರ್ ಕಾಮತ್, ಶಿವಿಲ್ ಕೌಶಿಕ್, ಸಿದ್ಧಾರ್ಥ ಪಟ್ಟಿಯ ಪ್ರಮುಖ ಆಟಗಾರರು. ಎ ವಿಭಾಗದಲ್ಲಿ 60 ಮಂದಿ ಆಟಗಾರರಿದ್ದು, ಪ್ರತಿಯೊಂದು ತಂಡವು ಈ ವಿಭಾಗದಿಂದ 5 ಆಟಗಾರರನ್ನು ಖರೀದಿಸುವುದು ಕಡ್ಡಾಯವಾಗಿದೆ. ಬಿ ವಿಭಾಗದಿಂದ ಪ್ರತಿಯೊಂದು ತಂಡವು ಕನಿಷ್ಠ ಮೂರು ಮತ್ತು ಗರಿಷ್ಠ 4 ಆಟಗಾರರನ್ನು ಖರೀದಿಸಬೇಕಾಗಿದೆ. ಸಿ ವಿಭಾಗದಲ್ಲಿ 200 ಮಂದಿ ಆಟಗಾರರು ವಿವಿಧ ತಂಡಗಳನ್ನು ಸೇರಲಿದ್ದಾರೆ. ಪ್ರತಿಯೊಂದು ತಂಡವು ಈ ವಿಭಾಗದಿಂದ ಕನಿಷ್ಠ 6 ಮತ್ತು ಗರಿಷ್ಠ 10 ಮಂದಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಅವರು ವಿವರ ನೀಡಿದರು.
ಗೋಷ್ಠಿಯಲ್ಲಿ ಪ್ರಕಾಶ್ ಗರೋಡಿ, ಶಶಿಧರ್ ಕೋಡಿಕಲ್, ಅನ್ವರ್ ಪಾಷಾ, ಸರ್ಫುದ್ದೀನ್ ಉಪಸ್ಥಿತರಿದ್ದರು.







