ಮಗಳು ಐಸಿಯು ನಲ್ಲಿರುವಾಗ ಆಡಿ ದೇಶವನ್ನು ಗೆಲ್ಲಿಸಿದ ಮೊಹಮ್ಮದ್ ಶಮಿ

ಹೊಸದಿಲ್ಲಿ, ಅ.5: ನ್ಯೂಜಿಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಲ್ಲಿ ಭಾರತ 178 ರನ್ನುಗಳ ವಿಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸ್ಥಳೀಯ ಕ್ರಿಕೆಟಿಗ ಮುಹಮ್ಮದ್ ಶಮಿ. ಈ ಪಂದ್ಯದಲ್ಲಿ ಅವರು ಎರಡು ಇನ್ನಿಂಗ್ಸ್ ನಲ್ಲಿ ಆರು ವಿಕೆಟ್ ಗಳನ್ನು ಉರುಳಿಸಿ ಭಾರತ ಸರಣಿ ಗೆಲ್ಲುವಂತೆ ಮಾಡಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಪ್ರಥಮ ಸ್ಥಾನ ತಂದು ಕೊಟ್ಟವರು.
ಈ ವಿಜಯವನ್ನು ಕ್ರಿಕೆಟ್ ಪ್ರೇಮಿಗಳು ಆಚರಿಸುತ್ತಿರಬಹುದು. ಆದರೆ ರವಿವಾರದಂದು ಈ ಪಂದ್ಯದಲ್ಲಿ ಶಮಿ ಅವರು ಆಡುತ್ತಿದ್ದಾಗ ಅವರ 14 ತಿಂಗಳ ಹರೆಯದ ಪುತ್ರಿ ಆಯಿರಾ ತೀವ್ರ ಜ್ವರದಿಂದ ಬಳಲಿ ನಗರದ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆಂದು ಈಗ ತಿಳಿದು ಬಂದಿದೆ. ಆದರೆ ಈ ವಿಷಯವನ್ನು ಶಮಿಯವರಿಗೆ ದಿನದ ಆಟ ಮುಗಿದ ನಂತರ ಹೇಳಲಾಗಿತ್ತು.
ಮಾಧ್ಯಮ ವರದಿಗಳ ಪ್ರಕಾರ ಶಮಿ ಅವರ ಪುತ್ರಿ ಆಯಿರಾ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಳು. ಪಂದ್ಯ ಮುಗಿದ ಕೂಡಲೇ ಆಸ್ಪತ್ರೆಗೆ ಧಾವಿಸಿದ ಶಮಿ ಮಗಳ ಬಳಿಯಿದ್ದು ಮರುದಿನ ಮತ್ತೆ ಅಂಗಳದಲ್ಲಿ ಹಾಜರಿದ್ದರು. ಸೋಮವಾರ ಅವರ ಮಗಳು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಳು.
ಶಮಿ ಜೂನ್ 2014 ರಲ್ಲಿ ಮೊರಾದಾಬಾದ್ ನಲ್ಲಿ ಹಸೀನ್ ಜಾನ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ 2015ರ ಜುಲೈನಲ್ಲಿ ಆಯಿರಾ ಹುಟ್ಟಿದ್ದಳು.








