ಸೈನಿಕರ ಬಗ್ಗೆ ಅವಮಾನಕಾರಿ ಹೇಳಿಕೆ: ತಪ್ಪಾಯ್ತು ಎಂದ ಓಂ ಪುರಿಯ ವಿನಂತಿ ಏನು ನೋಡಿ

ಹೊಸದಿಲ್ಲಿ, ಅ.5: ಭಾರತೀಯ ಯೋಧರ ಬಗ್ಗೆ ‘ಅವಮಾನಕರ ಹೇಳಿಕೆ’ ನೀಡಿದ್ದಾರೆಂಬ ಕಾರಣಕ್ಕಾಗಿ ದೇಶದ್ರೋಹದ ಪ್ರಕರಣ ಎದುರಿಸುತ್ತಿರುವ ಹಿಂದಿ ನಟ ಓಂ ಪುರಿ ಈಗ ಕ್ಷಮೆಯಾಚಿಸಿದ್ದು ತಾವು ಶಿಕ್ಷಾರ್ಹರು ಎಂದು ಹೇಳಿಕೊಂಡಿದ್ದಾರೆ.
ಸೆಪ್ಟೆಂಬರ್ 18 ರ ಉರಿ ದಾಳಿಯ ನಂತರ ಪಾಕಿಸ್ತಾನಿ ನಟರಿಗೆ ಹಿಂದಿ ಚಿತ್ರ ನಿರ್ಮಾಪಕರು ಹೇರಿರುವ ನಿಷೇಧದ ಬಗ್ಗೆ ಪುರಿ ಅವರು ಟಿವಿ ಚಾನಲ್ ಒಂದರ ಚರ್ಚೆಯೊಂದರಲ್ಲಿ ಭಾಗವಹಿಸುತ್ತಿದ್ದಾಗ ‘‘ಅವರನ್ನು(ಯೋಧರನ್ನು) ಯಾರಾದರೂ ಸೇನೆ ಸೇರಲು ಬಲವಂತ ಪಡಿಸಿದ್ದರೇನು?’’ ಎಂದು ಪ್ರಶ್ನಿಸಿ ವಿವಾದಕ್ಕೀಡಾಗಿದ್ದರು.
ತಮ್ಮ ವಿರುದ್ಧ ವಕೀಲರೊಬ್ಬರು ಪೊಲೀಸ್ ದೂರು ದಾಖಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುರಿ ‘‘ನಾನು ಹೇಳಿದ ವಿಚಾರದ ಬಗ್ಗೆ ನನಗೆ ಮುಜುಗರವಾಗಿದೆ. ನಾನು ಶಿಕ್ಷೆಗೆ ಅರ್ಹ, ಕ್ಷಮೆಗಲ್ಲ. ಅವರು ನನ್ನನ್ನು ಕ್ಷಮಿಸುವುದಾದರೆ ನಾನು ಆ (ಉರಿ ದಾಳಿ ಹುತಾತ್ಮ) ಕುಟುಂಬದ ಕ್ಷಮೆಯಾಚಿಸುತ್ತೇನೆ. ನಾನು ಇಡೀ ದೇಶದ ಹಾಗೂ ಸೇನೆಯ ಕ್ಷಮೆ ಕೋರುತ್ತೇನೆ’’ ಎಂದು ಹೇಳಿದ್ದಾರೆ.
ವಕೀಲರು ಪುರಿ ವಿರುದ್ಧ ದೂರು ದಾಖಲಿಸಿದ್ದ ದೂರಿನ ಆಧಾರದಲ್ಲಿ ಎಫ್ ಐ ಆರ್ ದಾಖಲಿಸಬಹುದೇ ಎಂಬುದನ್ನು ಪೊಲೀಸರು ಕಾನೂನಾತ್ಮಕವಾಗಿ ಪರಿಶೀಲಿಸುತ್ತಿದ್ದಾರೆ.
ಪಾಕಿಸ್ತಾನಿ ಚಲನಚಿತ್ರವೊಂದರಲ್ಲಿ (ಆ್ಯಕ್ಟರ್ ಇನ್ ಲಾ) ನಟಿಸಿದ ಕೆಲವೇ ಕೆಲವು ಬಾಲಿವುಡ್ ನಟರಲ್ಲಿ ಪುರಿ ಒಬ್ಬರಾಗಿದ್ದಾರೆ.







