ಜೈಲಿಗೆ ಹೋದ ಪಾಪಪ್ರಜ್ಞೆಯಿಂದ ಬಿಜೆಪಿಗರಿಂದ ಸರಕಾರದ ಬಗ್ಗೆ ಟೀಕೆ: ಸಿಎಂ ವ್ಯಂಗ್ಯ

ತುಮಕೂರು, ಅ.5: ರಾಜ್ಯದಲ್ಲಿ ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಮಾಡಬಾರದ್ದನ್ನೆಲ್ಲ ಮಾಡಿದರು. ಕೊನೆಗೆ ಜೈಲಿಗೂ ಹೋದರು. ಆ ಪಾಪ ಪ್ರಜ್ಞೆ ಅವರನ್ನು ಇನ್ನೂ ಕಾಡುತ್ತಿದೆ. ಹೀಗಾಗಿ ನಮ್ಮ ಸರಕಾರದ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಕಾವೇರಿ ವಿವಾದ ಇಂದು ನಿನ್ನೆಯದಲ್ಲ. ಮಳೆ ಕೊರತೆ ಕಂಡು ಬಂದ ವರ್ಷಗಳಲ್ಲಿ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ತಿಳಿಸಿದರು.
ಕುಡಿಯುವ ಉದ್ದೇಶಕ್ಕೆ ಜೂನ್ ವರೆಗೆ ಎಷ್ಟು ನೀರು ಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಎಂತಹ ಕಷ್ಟದ ಪರಿಸ್ಥಿತಿಯೇ ಎದುರಾದರೂ ಕುಡಿಯುವ ಉದ್ದೇಶಕ್ಕಾಗಿ ನೀರು ಉಳಿಸಿಕೊಳ್ಳುತ್ತೇವೆ ಎಂದರು.
ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ವಿಧೇಯಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಕೆಲ ಸ್ಪಷ್ಟನೆ ಕೇಳಿದ್ದಾರೆ. ಅದನ್ನು ಅವರಿಗೆ ಕಳುಹಿಸಿಕೊಡಲಾಗುವುದು. ಪೊಲೀಸ್ ಸಿಬ್ಬಂದಿಯ ವೇತನ ಹೆಚ್ಚಳ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.







