ಇಮ್ರಾನ್ ಬಿಲಾಲ್‌ಗೆ ಜೀವಾವಧಿ ಶಿಕ್ಷೆ

ಬೆಂಗಳೂರು, ಅ.5: ಸಿಸಿಬಿ ಪೊಲೀಸರಿಂದ 9 ವರ್ಷಗಳ ಹಿಂದೆ ಬಂಧಿತನಾಗಿದ್ದ ಕಾಶ್ಮೀರ ಮೂಲದ ಭಯೋತ್ಪಾದಕ ಇಮ್ರಾನ್ ಬಿಲಾಲ್ ಗೆ ಬೆಂಗಳೂರಿನ 56ನೇ ಸೆಷನ್ಸ್ ನ್ಯಾಯಾಲಯವು ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ.
56ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಕೋಟ್ರಯ್ಯ ಎಂ ಹಿರೇಮಠ ಅವರು ಇಮ್ರಾನ್ ಬಿಲಾಲ್ ಗೆ ಇಂದು ಶಿಕ್ಷೆ ಪ್ರಕಟಿಸಿದರು.
ನ್ಯಾಯಮೂರ್ತಿ ಕೋಟ್ರಯ್ಯ ಎಂ ಹಿರೇಮಠ ವಿಚಾರಣೆಯನ್ನು ಮಂಗಳವಾರ ನಡೆಸಿ ಇಮ್ರಾನ್ ಅಪರಾಧಿ ಎಂದು ತೀರ್ಮಾನಿಸಿ ಶಿಕ್ಷೆ ಯ ಪ್ರಮಾಣವನ್ನು ಬುಧವಾರಕ್ಕೆ ಕಾಯ್ದಿರಿಸಿದ್ದರು.
32 ವರ್ಷದ ಇಮ್ರಾನ್ ಬಿಲಾಲ್ ಮೂಲತಃ ಜಮ್ಮು ಮತ್ತು ಕಾಶ್ಮೀರದವನಾಗಿದ್ದು ,ಪಾಕಿಸ್ತಾನದಲ್ಲಿ ಈತ ಉಗ್ರ ತರಬೇತಿ ಪಡೆದಿದ್ದ ಎಂದು ಹೇಳಲಾಗುತ್ತಿದೆ.
2007, ಜನವರಿ 5ರಂದು ಹೊಸಪೇಟೆಯಿಂದ ಬೆಂಗಳೂರಿಗೆ ಖಾಸಗಿ ಬಸ್ ನಲ್ಲಿ ಆಗಮಿಸುತ್ತಿದ್ದ ಇಮ್ರಾನ್ ಬಿಲಾಲ್ ನನ್ನು ಗೊರಗುಂಟೆ ಪಾಳ್ಯದ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದರು. ಆತನಿಂದ ಎಕೆ 56 ಗನ್, 300 ಸುತ್ತು ಜೀವಂತ ಗುಂಡುಗಳು, ಸ್ಯಾಟಲೈಟ್ ಫೋನ್ ಹಾಗೂ 5 ಗ್ರೆನೇಡ್ ಹಲವು ಸಿಮ್ ಕಾರ್ಡ್ ಗಳು, ಬೆಂಗಳೂರು ನಗರದ ಮ್ಯಾಪ್ ನ್ನು ವಶಪಡಿಸಿಕೊಂಡಿದ್ದರು.
ಕರ್ನಾಟಕದ ಖ್ಯಾತ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಗಳಾದ ಇನ್ ಫೋಸಿಸ್ ಹಾಗೂ ವಿಪ್ರೋ ಕಚೇರಿಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ ಆಗಮಿಸಿದ್ದ ಇಮ್ರಾನ್ ಬಿಲಾಲ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.







