ಅ.7ರಂದು ‘ಶಾಂತಿ ಮತ್ತು ಮಾನವೀಯತೆ ’ಅಭಿಯಾನ ಸಮಾವೇಶ
ಈಶ ವಿಠಲದಾಸ ಸ್ವಾಮೀಜಿ, ರೆ.ಫಾ. ಜಾನ್ ಫೆರ್ನಾಂಡಿಸ್‌ಗೆ ‘ಸದ್ಭಾವನಾ ಸನ್ಮಾನ’

ಮಂಗಳೂರು, ಅ.5: ದ.ಕ. ಜಿಲ್ಲೆಯಾದ್ಯಂತ ನಡೆಯುತ್ತಿರುವ ‘ಶಾಂತಿ ಮತ್ತು ಮಾನವೀಯತೆ’ ಅಭಿಯಾನದ ಅಂಗವಾಗಿ ಅ. 7ರಂದು ನಗರದ ಪುರಭವನದಲ್ಲಿ ಸಮಾವೇಶ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅಭಿಯಾನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ. ಸತ್ಯನಾರಾಯಣ ಮಲ್ಲಿಪಟ್ಣ, ಸಂಜೆ 3.30ರಿಂದ ವಿದ್ಯಾರ್ಥಿ ಸಮಾವೇಶ, ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ, ಸದ್ಭಾವನಾ ಸಮ್ಮಾನ್ ಹಾಗೂ ಬಹುಭಾಷಾ ಕವಿಗೋಷ್ಠಿಯೊಂದಿಗೆ ಸಮಾವೇಶ ನಡೆಯಲಿದೆ ಎಂದರು.
ಸೆ. 14ರಂದು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಸಮಾವೇಶ ನಡೆಯಲಿದೆ. ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳಾದ ಮೂಡಬಿದ್ರೆ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶ್ರೇಯ ಪೈ, ಬಂಟ್ವಾಳ ವಿದ್ಯಾಗಿರಿ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ಕುಶಿ ಎ. ಚೌಟ, ಪುತ್ತೂರು ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ಪವಿತ್ರಾ ಪಿ., ಬೆಳ್ತಂಗಡಿ ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಭಾರ್ಗವಿ ಶಬರಾಯ, ಸುಳ್ಯ ಗಾಂಧಿನಗರ ಸರಕಾರಿ ಪ್ರೌಢಶಾಲೆಯ ಜ್ಯೋತಿ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಸಂತ ಜೆರೊಸಾ ಪ್ರೌಢಶಾಲೆಯ ಕೃಪಾ ಮರಿಯಾ ರಸ್ಕಿನ್ನಾ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 5 ಗಂಟೆಗೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಂಗಳೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ. ಸುರೇಂದ್ರ ರಾವ್, ಮಂಗಳೂರು ನಗರ ಪೊಲೀಸ್ ಉಪ ಆಯುಕ್ತ ಕೆ.ಎಂ. ಶಾಂತರಾಜು ಭಾಗವಹಿಸುವರು. ಈ ಸಂದರ್ಭ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ಕಿರು ವೀಡಿಯೋ ಚಿತ್ರ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸುಮಾರು ಸ್ಪರ್ಧೆಯಲ್ಲಿ 650 ವಿದ್ಯಾರ್ಥಿಗಳು ಪ್ರಬಂಧಗಳು ಮಂಡಿಸಿದ್ದರು. ಕಿರು ವೀಡಿಯೋ ಚಿತ್ರ ಸ್ಪರ್ಧೆಯಲ್ಲಿ 20 ಮಂದಿ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಬಂದ 10 ವೀಡಿಯೋ ಚಿತ್ರಗಳಲ್ಲಿ ವಿಷಯಕ್ಕೆ ಸಂಬಂಧಪಟ್ಟ 2 ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ಬಹುಮಾನವಾಗಿ 15,000 ರೂ. ಹಾಗೂ ದ್ವಿತೀಯ 10,000 ರೂ. ಬಹುಮಾನವನ್ನು ವಿಜೇತರಿಗೆ ನೀಡಲಾಗುವುದು. ಉಳಿದಂತೆ ಭಾಗವಹಿಸಿದ ಐದು ವೀಡಿಯೋ ಚಿತ್ರಗಳಿಗೆ ಗೌರವ ಪೂರ್ವಕವಾಗಿ ತಲಾ 1000 ರೂ. ಪ್ರೋತ್ಸಾಹ ಧನ ನೀಡಲಾಗುವುದು. ಸಮಾವೇಶದಲ್ಲಿ ಬಹುಮಾನಿತ ಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಸಮಾವೇಶದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸುಮಾರು 1000 ಮಂದಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಸಾಂಕೇತಿಕವಾಗಿ ವಿತರಿಸುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದವರು ಹೇಳಿದರು.
ಸಂಜೆ 7:15ಕ್ಕೆ ಕವಿ, ಸಾಹಿತಿ, ರಂಗಕರ್ಮಿ ಡಾ. ನಾ. ದಾಮೋದರ ಶೆಟ್ಟಿ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಕವಿಗಳಾದ ದಯಾನಂದ ಕತ್ತಲ್‌ಸಾರ್, ಪ್ರೊ. ರಾಜಾರಾಂ ವರ್ಮ, ಸ್ಮಿತಾ ಪ್ರಭು, ಆಯಿಷಾ ಯು.ಕೆ., ಮುಹಮ್ಮದ್ ಬಡ್ಡೂರು, ಭಾಸ್ಕರ ರೈ ಕುಕ್ಕುವಳ್ಳಿ, ಸೈಯದ್ ಸಮೀಉಲ್ಲಾ ಬರ್ಮಾವರ್ ಭಾಗವಹಿಸಲಿದ್ದಾರೆ ಎಂದು ಡಾ. ಸತ್ಯನಾರಾಯಣ ಮಲ್ಲಿಪಟ್ಣ ತಿಳಿಸಿದರು. ಗೋಷ್ಠಿಯಲ್ಲಿ ಅಭಿಯಾನ ಸ್ವಾಗತ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಕಾರ್ಯದರ್ಶಿ ಉಮರ್ ಯು.ಎಚ್., ಸದಸ್ಯರಾದ ರೇಮಂಡ್ ಡಿಕುನ್ನಾ, ವಿಜಯಲಕ್ಷ್ಮಿ ಶೆಟ್ಟಿ, ಸಾಜಿದಾ ಮೂಮಿನ್ ಉಪಸ್ಥಿತರಿದ್ದರು.
ಈಶ ವಿಠಲದಾಸ ಸ್ವಾಮೀಜಿ, ರೆ.ಫಾ. ಜಾನ್ ಫೆರ್ನಾಂಡಿಸ್‌ಗೆ ‘ಸದ್ಭಾವನಾ ಸನ್ಮಾನ’
ಸಮಾರಂಭದಲ್ಲಿ ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಹಾಗೂ ಮಂಗಳೂರು ವಿವಿ ಕ್ರೈಸ್ತ ಧರ್ಮ ಅಧ್ಯಯನ ಪೀಠದ ಮಾಜಿ ಅಧ್ಯಕ್ಷ ರೆ.ಫಾ. ಜಾನ್ ಫೆರ್ನಾಂಡಿಸ್‌ರವರಿಗೆ ಸದ್ಭಾವನಾ ಸನ್ಮಾನ ಪ್ರಸಸ್ತಿ ನೀಡಿ ಗೌರವಿಸಲಾಗುವುದು. ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಹಾಗೂ ಯುನಿಟಿ ಅಕಾಡೆಮಿ ಆಫ್ ಎಜುಕೇಶನ್‌ನ ಅಧ್ಯಕ್ಷ ಡಾ.ಸಿ.ಪಿ. ಹಬೀಬ್ ರಹ್ಮಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಡಾ. ಸತ್ಯನಾರಾಯಣ ಮಲ್ಲಿಪಟ್ಣ ತಿಳಿಸಿದರು.
ಅಭಿಯಾನ ಮುಂದುವರಿಕೆ!
ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ‘ಶಾಂತಿ ಮತ್ತು ಮಾನವೀಯತೆ’ ಅಭಿಯಾನ ವಿವಿಧ ಕಾರ್ಯಕ್ರಮಗಳೊಂದಿಗೆ ಮುಂದುವರಿಯಲಿದೆ. ಮುಂದೆ ವಿದ್ಯಾರ್ಥಿಗಳು ಹಾಗೂ ಪತ್ರಕರ್ತರ ಪ್ರತ್ಯೇಕ ಸಮಾವೇಶಗಳು ನಡೆಸುವ ಚಿಂತನೆ ಇದೆ. ಇದಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಘೋಷಣೆಗಳ ಬರಹ, ಜಿಲ್ಲೆಯ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಆಹ್ವಾನದ ಮೇರೆಗೆ ಬೀದಿ ನಾಟಕಗಳ ಪ್ರದರ್ಶನವನ್ನೂ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಅ. 29ರಂದು ವಿವಿಧ ಮಹಿಳಾ ಸಂಘಟನೆಗಳ ಸಹಭಾಗಿತ್ವದಲ್ಲಿ ಮಹಿಳೆಯರ ವಿಚಾರ ವಿನಿಮಯ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ ಎಂದು ಡಾ. ಸತ್ಯನಾರಾಯಣ ಮಲ್ಲಿಪಟ್ಣ ತಿಳಿಸಿದರು.







