ಪರಿಹಾರ ನೀಡದೆ ನೀರು ಶೇಖರಿಸಲು ಬಿಡಲಾರೆವು
ತುಂಬೆ ಹೊಸ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿ ಪುನರುಚ್ಚಾರ

ಬಂಟ್ವಾಳ, ಅ. 5: ಮಂಗಳೂರು ನಗರಕ್ಕೆ ನೀರು ಪೂರೈಸಲು ನೇತ್ರಾವತಿ ನದಿಗೆ ಅಡ್ಡವಾಗಿ ತುಂಬೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಡ್ಯಾಂನಿಂದ ಜಮೀನು ಮುಳುಗಡೆಯಾಗುವ ಸಂತ್ರಸ್ತರಿಗೆ ಪರಿಹಾರ ನೀಡದೆ ಡ್ಯಾಂನಲ್ಲಿ ನೀರು ಶೇಖರಿಸಲು ಬಿಡಲಾರೆವು ಎಂದು ಡ್ಯಾಂ ನಿರ್ಮಾಣ ಸಂತ್ರಸ್ತ ಹೋರಾಟ ಸಮಿತಿಯ ಪದಾಧಿಕಾರಿಗಳು ಪುನರುಚ್ಚರಿಸಿದ್ದಾರೆ.
ಬುಧವಾರ ತಮ್ಮನ್ನು ಭೇಟಿಯಾದ ಪತ್ರಕರ್ತರಲ್ಲಿ ಮಾತನಾಡಿದ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಸಂತ್ರಸ್ತ ರೈತರು, ಮಂಗಳವಾರದಂದು ಮಂಗಳೂರು ಮೇಯರ್ ಹರಿನಾಥ್ ಸುದ್ದಿಗೋಷ್ಠಿ ನಡೆಸಿ ತುಂಬೆ ಹೊಸ ಡ್ಯಾಂನಲ್ಲಿ ಪ್ರಸ್ತುತ ವರ್ಷ 5 ಮೀಟರ್ ನೀರು ಶೇಖರಣೆ ಮಾಡಲಾಗುವುದು. ಇದರಿಂದ ಸುತ್ತಮುತ್ತಲಿನ ಯಾವುದೇ ಜಮೀನು ಮುಳುಗಡೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಹಿಂದೆ ಮಾಹಿತಿ ಹಕ್ಕಿನಡಿ ಮುಳುಗಡೆ ಪ್ರದೇಶದ ಮಾಹಿತಿ ಕೇಳಿದಾಗ ಹೊಸ ಡ್ಯಾಂನಲ್ಲಿ 5 ಮೀಟರ್ ನೀರು ಶೇಖರಣೆಯಿಂದ 53 ಎಕರೆ ಜಮೀನು ಮುಳುಗಡೆಯಾಗುತ್ತದೆ ಎಂದು ಮನಪಾ ಮಾಹಿತಿ ನೀಡಿತ್ತು. ಇದೀಗ ಮೇಯರ್ 5 ಮೀಟರ್ ನೀರು ಶೇಖರಣೆಯಿಂದ ಯಾವುದೇ ಜಮೀನು ಮುಳುಗಡೆಯಾಗುವುದಿಲ್ಲ ಎಂದು ಹೇಳುವ ಮೂಲಕ ಸಂತ್ರಸ್ತ ರೈತರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಮೂರು ಹಂತದ ಸರ್ವೇ ಕಾರ್ಯ ಈಗಾಗಲೇ ಮುಗಿದು ನಾಲ್ಕನೆ ಹಂತದ ಸರ್ವೇ ಕಾರ್ಯ ನಡೆಯುತ್ತಿದೆ. ಅದೂ ಕೂಡಾ ಬಹುತೇಕ ಮುಕ್ತಾಯದ ಹಂತದಲ್ಲಿದೆ ಎಂದು ಮೇಯರ್‌ರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಈವರೆಗೆ ಮುಳುಗಡೆ ಪ್ರದೇಶದ ಸರ್ವೇ ಕಾರ್ಯ 6 ಹಂತದಲ್ಲಿ ನಡೆಸಲಾಗಿದೆ. ಆದರೆ ಇದುವರೆಗೂ ಮುಳುಗಡೆ ಪ್ರದೇಶದ ಸ್ಪಷ್ಟ ಮಾಹಿತಿಯನ್ನು ಮನಪಾವಾಗಲಿ, ಜಿಲ್ಲಾಡಳಿತವಾಗಲಿ, ಸಂಬಂಧಿಸಿದ ಇಲಾಖಾ ಅಧಿಕಾರಿಗಳಾಗಲಿ ನೀಡಿಲ್ಲ ಎಂದು ಹೇಳಿದ ಹೋರಾಟ ಸಮಿತಿಯ ಪದಾಧಿಕಾರಿಗಳು, ಸಚಿವರಾದಿಯಾಗಿ ಉನ್ನತ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವಾರು ಸಭೆಗಳು ನಡೆದರೂ ಸಂತ್ರಸ್ತ ರೈತರ ಬೇಡಿಕೆಯನ್ನು ಈಡೇರಿಸಲು ಈವರೆಗೂ ಸಾಧ್ಯವಾಗಿಲ್ಲ. ಮುಳುಗಡೆ ಭೀತಿಯಿಂದ ತಾಲೂಕಿನ 5 ಗ್ರಾಮದ ನೂರಾರು ರೈತರು 12 ವರ್ಷದಿಂದ ಕೃಷಿ ಚಟುವಟಿಕೆಯನ್ನು ಸ್ಥಗಿತಗೊಳಿಸಿ ಕಂಗಾಲಾಗಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಭರವಸೆಯ ಮಾತುಗಳಷ್ಟೇ ಸಿಗುತ್ತಿದೆ ವಿನಹ ಪರಿಹಾರ ಇನ್ನೂ ಸಿಕ್ಕಿಲ್ಲ. ಮೇಯರ್ ಹರಿನಾಥ್ ಮಂಗಳೂರಿನಲ್ಲಿ ಕೂತು ಸುದ್ದಿಗೋಷ್ಠಿ ನಡೆಸುವ ಬದಲಿಗೆ ಮುಳುಗಡೆ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಲಿ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಂತ್ರಸ್ತ ಹೋರಾಟ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಪ್ರಧಾನ ಕಾರ್ಯದರ್ಶಿ ಇದಿನಬ್ಬ, ರೈತ ಮುಖಂಡ ಶರತ್ ಕುಮಾರ್, ಸುದೇಶ್ ಮಯ್ಯ ಉಪಸ್ಥಿತರಿದ್ದರು.
ಕಾನೂನು ಹೋರಾಟ
ಸದ್ಯ ತುಂಬೆ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹುಸಿ ಭರವಸೆಯಿಂದ ನಿರಾಸೆಗೊಂಡಿರುವ ಸಂತ್ರಸ್ತ ರೈತರು ಇದೀಗ ಕೊನೆಯ ಅಸ್ತ್ರವಾಗಿ ಕಾನೂನು ಹೋರಾಟಕ್ಕೆ ಧುಮುಕಿದ್ದು ಈಗಾಗಲೇ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಲಾಗಿದೆ. ನ್ಯಾಯಾಲಯದಲ್ಲಿ ಹೋರಾಟ ಸಮಿತಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ಪರಿಗಣಿಸಿ ಜಿಲ್ಲಾಡಳಿತ, ಸಹಾಯಕ ಕಮಿಷನರ್, ಬಂಟ್ವಾಳ ತಹಶೀಲ್ದಾರ್, ವಿಶೇಷ ಭೂ ಸ್ವಾಧೀನ ಅಧಿಕಾರಿ, ಮನಪಾ ಕಮಿಷನರ್, ಕುಂಡ್ಸೆಪ್ ಮುಖ್ಯ ಕಾರ್ಯಪಾಲಕ ಅಭಿಯಂತರ ಸೇರಿದಂತೆ 11 ಮಂದಿಗೆ ನೋಟಿಸ್ ಜಾರಿಗೊಳಿಸಿದೆ. ಡ್ಯಾಂ ನಿರ್ಮಾಣದಿಂದಾಗಿ ಜಮೀನು ಕಳೆದುಕೊಳ್ಳುವ ಸಂತ್ರಸ್ತರಿಗೆ ಪರಿಹಾರ ನೀಡದೆ ನೀರು ಶೇಖರಿಸಬಾರದು ಎಂದು ಆದೇಶಿಸಿದಲ್ಲದೆ ಈ ಕುರಿತಂತೆ ಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದೆ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಇದೇ ವೇಳೆ ತಿಳಿಸಿದ್ದಾರೆ.
ನಾಳೆ ಸಾಮೂಹಿಕ ಪ್ರಾರ್ಥನೆ
ಬುಧವಾರದಂದು ಮುಳುಗಡೆ ಭಾಗದ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಹೋರಾಟ ಸಮಿತಿ ವತಿಯಿಂದ ಸಂತ್ರಸ್ತ ರೈತರು ಹಾಗೂ ಸಾರ್ವಜನಿಕರು ಸಾಮೂಹಿಕ ಪ್ರಾರ್ಥನೆಯ ಮೂಲಕ ತಮ್ಮ ಬೇಡಿಕೆ ಈಡೇರಿಸಲು ದೇವರ ಮೊರೆ ಹೋಗಲು ಮುಂದಾಗಿದ್ದರು. ಆದರೆ ಅನಿವಾರ್ಯ ಕಾರಣದಿಂದ ಬುಧವಾರದ ಸಾಮೂಹಿಕ ಪ್ರಾರ್ಥನೆಯನ್ನು ರದ್ದುಗೊಳಿಸಿದ್ದು ಗುರುವಾರದಂದು ಶ್ರೀ ಕ್ಷೇತ್ರ ಮಿತ್ತಮಜಲಿನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗುವುದು ಎಂದು ಹೋರಾಟ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.







