ಸಂಗಬೆಟ್ಟು: ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ
ಬಂಟ್ವಾಳ, ಅ. 5: ಪ್ರಸಕ್ತ ಸಾಲಿನಲ್ಲಿ ಬಂಟ್ವಾಳ ವಿಧಾನಸಬಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗಾಗಿ ಒಟ್ಟು 18 ಕೋಟಿ ರೂ. ಮತ್ತು ಗಿರಿಜನ ಅಭಿವೃದ್ಧಿ ಉಪ ಯೋಜನೆಯಡಿ 12 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.
ಮಂಗಳವಾರ ಸಂಜೆ ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ನೇರವೇರಿಸಿ ಬಳಿಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿಯಲ್ಲಿ ಫಲ್ಗುಣಿ ಹೊಳೆಯಿಂದ ಸಂಗಬೆಟ್ಟು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಶುದ್ಧಿಕರಿಸಿದ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಶೀಘ್ರದಲ್ಲೇ ಇದರ ಲೋಕಾರ್ಪಣೆ ನಡೆಯಲಿದೆ ಎಂದರು.
ಇದೇ ವೇಳೆ 10 ಲಕ್ಷ ರೂ. ವೆಚ್ಚದ ಸಂಗಬೆಟ್ಟು ಗ್ರಾಮದ ಕಲ್ಕುರಿ-ಓಂತಿಗೆ ರಸ್ತೆ, 10 ಲಕ್ಷ ರೂ. ವೆಚ್ಚದ ಕಿನ್ನಾಜೆ ರಸ್ತೆ, 10 ಲಕ್ಷ ರೂ. ವೆಚ್ಚದ ಪಡಿಜಾಲು ರಸ್ತೆ, 10 ಲಕ್ಷ ರೂ. ವೆಚ್ಚದ ಕರ್ಪೆ ಗ್ರಾಮದ ಬ್ರಾಂಡಿಪಾಲು ರಸ್ತೆ, 10 ಲಕ್ಷ ರೂ. ವೆಚ್ಚದ ಗುಳಿಗುಳಿ ರಸ್ತೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕರ್ಪೆ ಕೊಡಮಣಿತ್ತಾಯ ದೈವಸ್ಥಾನದ ರಸ್ತೆ, ಕುಪ್ಪೆಪದವು ಸಂಪರ್ಕ ಸೇತುವೆ ಬಗ್ಗೆ ಸಚಿವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ನಿವೃತ್ತ ಶಿಕ್ಷಕ ನಾರಾಯಣ ನಾಯಕ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಗ್ರಾಪಂ ಉಪಾಧ್ಯಕ್ಷ ಸತೀಶ್ ಪೂಜಾರಿ, ಮಾಜಿ ಉಪಾಧ್ಯಕ್ಷ ದೇವಪ್ಪ ಕರ್ಕೇರ, ಸಿದ್ಧಕಟ್ಟೆ ವ್ಯ.ಸೇ.ಸ. ಸಂಘದ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್, ಗ್ರಾಪಂ ಸದಸ್ಯರಾದ ಸುಭಾಷಿಣಿ, ಶಾರದಾ, ಶೇಖರ ನಾಯಕ್, ಕರ್ಪೆ ರೈತ ಸಂಘ ಅಧ್ಯಕ್ಷ ಗಣೇಶ್ ನಾಯಕ್, ನಿವೃತ್ತ ಶಿಕ್ಷಕ ವಿನಯ ಕುಮಾರ್, ವಿಟ್ಲ ಕಂದಾಯಾಧಿಕಾರಿ ದಿವಾಕರ ಉಪಸ್ಥಿತರಿದ್ದರು.
ತಾಪಂ ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸಿ, ವಂದಿಸಿದರು.







