ಕಾರಿನಲ್ಲಿ ಕಾಡುಹಂದಿ ಸಾಗಿಸುತ್ತಿದ್ದವರ ಬಂಧನ

ಕಾಸರಗೋಡು, ಅ.5: ಕಾಡು ಹಂದಿಯನ್ನು ಬೇಟೆಯಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ಮೂವರನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮುಳ್ಳೇರಿಯಾ ಕಾಟಿಪ್ಪಾರ ಪಾಂಡಿಯ ವಿನಯಕುಮಾರ್ (38) , ಪಾಂಡಿ ಪಲ್ಲಂಜಿಯ ಪಿ.ಜೆ. ಶಶಿಕುಮಾರ್ (29) ಮತ್ತು ಕುತ್ತಿಕೋಲ್ ನ ಕೆ.ಅಶೋಕ (39) ಎಂದು ಗುರುತಿಸಲಾಗಿದೆ. ಕಾರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಬುಧವಾರ ಮುಂಜಾನೆ ಎರಡು ಗಂಟೆ ಸುಮಾರಿಗೆ ಉಳಿಯತ್ತಡ್ಕ ಬಳಿ ರಾತ್ರಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಈ ದಾರಿಯಾಗಿ ಬಂದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು ಮೀಪುಗುರಿ ಎಂಬಲ್ಲಿ ಕಾರನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರನ್ನು ತಪಾಸಣೆ ನಡೆಸಿದಾಗ ಕಾರಿನ ಢಿಕ್ಕಿಯಲ್ಲಿ ಕಾಡು ಹಂದಿಯನ್ನು ಕೊಂದು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಸ್ಪೋಟಕ ಬಳಸಿ ಹಂದಿಯನ್ನು ಹಿಡಿದಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಇವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಂತೆ ಕೇಸು ದಾಖಲಿಸಲಾಗಿದ್ದು, ಪ್ರಕರಣವನ್ನು ಅರಣ್ಯ ಇಲಾಖೆಗೆ ಹಸ್ತಾತರಿಸಲಾಗಿದೆ.





