ಸಂಘ ಪರಿವಾರದಿಂದ ಆಹಾರ ಸಂಸ್ಕೃತಿಯ ಮೇಲೆ ದಾಳಿ: ಬಿ.ಆರ್.ಭಾಸ್ಕರ ಪ್ರಸಾದ್
.jpg)
ಈ ದೇಶಕ್ಕೆ ಕೂಗಿ ಹೇಳಬೇಕಿದೆ, ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು ಎಂದು. ಇಂದು ಸಂಘಪರಿವಾರದ ಶಕ್ತಿಗಳು ರಾಮನ ಹೆಸರಿನಲ್ಲಿ, ನಂತರ ದತ್ತಪೀಠದ ಹೆಸರಿನಲ್ಲಿ ರಾಜಕೀಯ ಮಾಡಿದರು. ಈಗ ದನದ ಹೆಸರಿನಲ್ಲಿ ರಾಜಕೀಯ ಮಾಡಲು ಆಹಾರ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದ್ದಾರೆ. ಒಂದು ವೇಳೆ ಇದೇ ದಾಳಿ ಮುಂದುವರಿದರೆ ನಾವು ಉಗ್ರವಾಗಿ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಬಿ.ಆರ್ ಭಾಸ್ಕರ್ ಪ್ರಸಾದ್ ಅಭಿಪ್ರಾಯಪಟ್ಟರು.
ಉಡುಪಿ ಚಲೋ ಅಂಗವಾಗಿ ನಡೆಯುತ್ತಿರುವ ಸ್ವಾಭಿಮಾನಿ ಸಂಘರ್ಷ ಜಾಥ ಇಂದು ಚನ್ನರಾಯಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ದನದ ಮಾಂಸ ರಫ್ತಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು ದಿನವೊಂದಕ್ಕೆ ಎರಡೂವರೆ ಲಕ್ಷ ದನಗಳನ್ನು ಬಳಸಲಾಗುತ್ತಿದೆ. ಒಂದು ವೇಳೆ 5 ವರ್ಷ ದನಗಳನ್ನು ಕೊಲ್ಲದೇ ಬಿಟ್ಟು ಜೀವಂತವಾಗಿ ಬಿಟ್ಟರೆ ಸುಮಾರು 90ಕೋಟಿ ದನಗಳ ಸಂಖ್ಯೆ ಹೆಚ್ಚಳವಾಗಿ ಆಹಾರಕ್ಕಾಗಿ ದೊಡ್ಡ ಸಮಸ್ಯೆ ಉಂಟಾಗುತ್ತದೆ. ಈ ರಫ್ತು ಮಾಡುವಲ್ಲಿ ಬಿಜೆಪಿ ಪಕ್ಷದ ರಾಜಕಾರಣಿಗಳೇ ಮುಂದಿದ್ದಾರೆ. ಅವರೆಲ್ಲಾ ಪ್ರತಿ ವರ್ಷ ಬಿಜೆಪಿಗೆ ಪಾರ್ಟಿ ಫಂಡ್ ಕೊಡುತ್ತಿದ್ದಾರೆ. ಆದರೆ ದನದ ಹೆಸರಿನಲ್ಲಿ ಜಗಳವಾಡಿ ಸಾಯುತ್ತಿರುವವರು ಮಾತ್ರ ಶೂದ್ರರಾಗಿರುವುದು ದುರಂತ ಎಂದರು.
ಭೂಮಿಯಲ್ಲಿ 800 ಎಕರೆ ಜಮೀನು ಇದೆ, ಅದರಲ್ಲಿ 400 ಎಕರೆ ನದಿ, ಕಾಡು, ಸಾಗರಗಳಾಗಿದೆ. 200 ಎಕರೆಯಲ್ಲಿ ಮನೆಗಳು ಕಾರ್ಖಾನೆಗಳಿವೆ. ಇತರೆ ಕಳೆದರೆ 100 ಕೋಟಿ ಎಕರೆ ಜಮೀನು ಕೃಷಿ ಯೋಗ್ಯವಾಗಿದೆ. ಭೂಸುಧಾರಣೆ ಆಶಯ ಈಡೇರಿಲ್ಲ. ಇದರ ಪ್ರಕಾರ ಸರಿಯಾಗಿ ಹಂಚಿದ್ದರೆ ತಲಾ 3 ಎಕರೆ ಸಿಗುತ್ತಿತ್ತು. ಆದರೆ ಇಂದು ಕೆಲವರೆ ಅತಿ ಹೆಚ್ಚಿನ ಭೂಮಿಯ ಒಡೆಯರಾಗಿದ್ದಾರೆ. ಹಲವರಿಗೆ ಅರ್ಧ ಎಕರೆ ಸಹ ಭೂಮಿ ಇಲ್ಲದೆ ವಂಚಿತರಾಗಿದ್ದಾರೆ. ಹಾಗಾಗಿ ಪ್ರತಿ ಕುಟುಂಬಕ್ಕೆ 5 ಎಕರೆ ಭೂಮಿ ಕೊಡಿ ಎಂಬ ಹಕ್ಕೊತ್ತಾಯ ಇಟ್ಟಿದ್ದೇವೆ ಎಂದು ತಿಳಿಸಿದರು. ಇವು ಘನತೆಯ ಬದುಕಿನ ಬೇಡಿಕೆಗಳಾಗಿದ್ದು ಇದಕ್ಕಾಗಿ ನೀವೆಲ್ಲರೂ ಉಡುಪಿ ಚಲೋಗೆ ಬರಬೇಕೆಂದು ಮನವಿ ಮಾಡುತ್ತೇನೆ ಎಂದರು.
ಹಲವಾರು ಸಂಘಟನೆಗಳು ಒಟ್ಟಾಗಿ ಅಂಬೇಡ್ಕರ್ ಫೋಟೊ ಮತ್ತು ನೀಲಿ ಬಾವುಟದಡಿ ಒಂದಾಗಿದ್ದು ಇದು ಐತಿಹಾಸಿಕ ಹೋರಾಟವಾಗಿದ್ದು ಇದಕ್ಕೆ ನಿಮ್ಮೆಲ್ಲರ ಸಕ್ರಿಯ ಬೆಂಬಲ ಕೋರುತ್ತೇನೆ ಎಂದರು.
ಆರ್ ಪಿ ಐ ಸತೀಶ್ ಮಾತನಾಡಿ, ನಾವೆಲ್ಲಾ ಉಡುಪಿಗೆ ಹೊರಡಲು ರೆಡಿಯಾಗಿದ್ದೇವೆ. ಗೋಹತ್ಯೆ ರಾಜಕೀಯವಾಗಿರುವಾಗ ಇವರು ಯಾವ ಬಟ್ಟೆ ಹಾಕಿಕೊಳ್ಳಬೇಕು ಎಂದು ಹೇಳುವ ನೀವು ಬೇಲೂರು ಹಳೇಬೀಡಿನ ಶಿಲಾಬಾಲಿಕೆಯರ ಚಿತ್ರಗಳನ್ನು ಬದಲಾಯಿಸಿ ಎಂದು ಸವಾಲೆಸೆದರು. ಸಂಘಪರಿವಾರದವರೆ ನಿಜವಾದ ದೇಶದ್ರೋಹಿಗಳಾಗಿದ್ದು ಇವರನ್ನು ತಿರಸ್ಕರಿಸಿ ಎಂದರು. ನಾನು ನಾಯಿ ಕತ್ತೆ ಏನಾದರೂ ಬೇಕಾದರೂ ತಿನ್ನುತ್ತೇನೆ ಇದನ್ನು ಬೇಡ ಅನ್ನಲು ಇವರ್ಯಾರು ಎಂದರು. ಹಿಂದೆ ದನದ ಮಾಂಸವನ್ನೆಲ್ಲಾ ಬ್ರಾಹ್ಮಣರೆ ತಿಂದು ಇಂದು ನಮಗೆ ಪಾಠ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.
ನಾವು ತಾಳ್ಮೆಯಿಂದ ಅಂಬೇಡ್ಕರ್ವಾದಿಗಳಾಗಿದ್ದು ಬುದ್ಧನ ಅನುಯಾಯಿಗಳಾಗಿದ್ದರಿಂದ ಸುಮ್ಮನೆ ಇದ್ದೇವೆ. ಇಲ್ಲದಿದ್ದರೆ ಸಂಘಪರಿವಾರವನ್ನು ಉಡೀಸ್ ಮಾಡುತ್ತಿದ್ದೇವೆ ಎಂದರು. ದೇವಸ್ಥಾನದ ಪ್ರವೇಶ ಇಲ್ಲದ ಮೇಲೆ ನಾವು ಈ ಧರ್ಮದಲ್ಲಿ ಯಾಕಿರಬೇಕು ಎಂದು ನಾವೆಲ್ಲರೂ ಯೋಚಿಸಬೇಕು ಎಂದರು.
ಹಿರಿಯ ದಲಿತ ಮುಖಂಡರಾದ ಎನ್. ವೆಂಕಟೇಶ್ ಮಾತನಾಡಿ, ಚಾರಿತ್ರಿಕವಾಗಿ ಹಿಂದುತ್ವದ ವಿರುದ್ಧ ದನಿಯೆತ್ತಿದ ಬುದ್ಧ, ಬಸವ, ಕಲ್ಬುರ್ಗಿ ಸೇರಿ ಹಲವಾರು ವಿಚಾರವಂತರನ್ನು ಕೊಂದಿದ್ದಾರೆ. ಇದನ್ನು ವಿರೋಧಿಸಲು ಉಡುಪಿ ಚಲೋ ನಡೆಯುತ್ತಿದೆ. ಹಿಂದೆ ಒಂದೇ ಈಸ್ಟ್ ಇಂಡಿಯಾ ಕಂಪನಿ ನಮ್ಮನ್ನು ಲೂಟಿ ಮಾಡಿತ್ತು ಇಂದು ಸಾವಿರಾರು ಕಂಪನಿಗಳು ನಮ್ಮನ್ನು ಹಿಂಡುತ್ತಿವೆ. ಓಟನ್ನು ದೋಚಿ ಅಟ್ಟಹಾಸಗೈಯ್ಯುತ್ತಿದ್ದಾರೆ. ಇದನ್ನು ಮುರಿದು ಸ್ವಾಭಿಮಾನಕ್ಕಾಗಿ ನಾವೆಲ್ಲಾ ಒಂದಾಗೋಣ ಎಂದು ಕರೆ ನೀಡಿದರು.
ಇದಕ್ಕೂ ಮೊದಲು ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ನೀಲಿ ಬಾವುಟ ಹಿಡಿದು ಜೈ ಭೀಮ್ ಘೋಷಣೆಗಳನ್ನೊಳಗೊಂಡ ಆಕರ್ಷಕ ಮೆರವಣಿಗೆ ನಡೆಯಿತು.







