ತಲಪಾಡಿ: ಕಾರು ಢಿಕ್ಕಿಯಾಗಿ ಲಾರಿ ನಿರ್ವಾಹಕ ಮೃತ್ಯು

ಉಳ್ಳಾಲ, ಅ.5: ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಪೊಲೀಸ್ ಚೆಕ್‌ಪೋಸ್ಟ್ ಬಳಿ ನಡೆದುಕೊಂಡು ಹೋಗುತ್ತಿದ್ದ ಲಾರಿ ಚಾಲಕ ಮತ್ತು ನಿರ್ವಾಹಕರಿಗೆ ಅಪರಿಚಿತ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ನಿರ್ವಾಹಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ರಾ.ಹೆ 66ರ ತಲಪಾಡಿ ಪೊಲೀಸ್ ಚೆಕ್‌ಪೋಸ್ಟ್ ಬಳಿಯ ರೆಸ್ಟೋರೆಂಟ್‌ನಲ್ಲಿ ಮಂಗಳವಾರ ರಾತ್ರಿ ಸುಮಾರು 10 ಗಂಟೆಯ ಸಮಯ ಪ್ರತ್ಯೇಕ ಸರಕು ಲಾರಿಗಳ ನಿರ್ವಾಹಕ ಮತ್ತು ಚಾಲಕರಿಬ್ಬರು ಊಟ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಲಾರಿಗಳನ್ನು ನಿಲ್ಲಿಸಲಾಗಿದ್ದ ಸ್ಥಳಕ್ಕೆ ಹಿಂತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಕೇರಳದಿಂದ ಮಿತಿಮೀರಿದ ವೇಗದಿಂದ ಬಂದ ಬಿಳಿ ಬಣ್ಣದ ಅಪರಿಚಿತ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಲಾರಿ ನಿರ್ವಾಹಕ ಕೇರಳ ಕಣ್ಣೂರಿನ ತಳಚ್ಚೇರಿ ನಿವಾಸಿರಂಜಿತ್(32)ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಚಾಲಕ ಮನೋಜ್(35)ಗಂಭೀರ ಗಾಯಗೊಂಡು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಢಿಕ್ಕಿ ಹೊಡೆದ ಕಾರು ಚಾಲಕ ಮಂಗಳೂರಿನ ಕಡೆ ಪರಾರಿಯಾಗಿದ್ದು ಸ್ಥಳಕ್ಕೆ ತೆರಳಿದ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.





