ಹೆಬ್ಬಾವಿನೊಂದಿಗೆ ಸೆಣಸಾಡಿ ಬದುಕಿಬಂದ 11ರ ಬಾಲಕ!

ಮಂಗಳೂರು, ಅ. 5: ಮನೆಯ ಕಡೆಗೆ ದಾರಿಯಲ್ಲಿ ಹೋಗುತ್ತಿದ್ದಾಗ ಪೊದೆಯಿಂದ ಹಠಾತ್ ಪ್ರತ್ಯಕ್ಷಗೊಂಡು ಮೈಮೇಲೆ ಹಾರಿ ಸುತ್ತಿಕೊಂಡ ಹೆಬ್ಬಾವಿನಿಂದ 11 ಬಾಲಕನೋರ್ವ ಕೆಲವು ಸಮಯ ಕಾಲ ಸೆಣಸಾಡಿ ಬದುಕಿಬಂದ ಘಟನೆ ಮಂಗಳವಾರ ಸಂಜೆ ಕೂಡೂರುಮನೆ ಸಜೀಪಮೂಡ ಎಂಬಲ್ಲಿ ನಡೆದಿದೆ.
ಹೆಬ್ಬಾವಿನ ದಾಳಿಯಿಂದ ವಿಚಲಿತನಾಗದೆ ಸಾಹಸ ಪ್ರದರ್ಶಿಸಿದ ಬಾಲಕಕನ್ನು ಸಜಿಪಮೂಡ ಕೊಳಕೆ ಕೂಡೂರು ನಿವಾಸಿ ಸುರೇಶ್ ಹಾಗೂ ಹರಿಣಾಕ್ಷಿ ದಂಪತಿಯ ಪುತ್ರ ವೈಶಾಖ್ (11) ಎಂದು ಗುರುತಿಸಲಾಗಿದೆ. ಈತ ಸಜಿಪಮೂಡ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ 6ನೆ ತರಗತಿಯ ವಿದ್ಯಾರ್ಥಿ.
ವೈಶಾಖ್ ಹೇಳುವಂತೆ ‘‘ಮಂಗಳವಾರ ಸಂಜೆ ಸುಮಾರು 6:30ಕ್ಕೆ ನಾನು ಕೊಳಕೆ ಕೂಡೂರು ಮನೆಯಿಂದ ಅಲ್ಲೇ ಹತ್ತಿರದಲ್ಲಿರುವ ಅಜ್ಜನ ಮನೆಗೆ ತೆರಳುತ್ತಿದ್ದೆ. ಮಾರ್ಗ ಮಧ್ಯೆ ಹೋಗುತ್ತಿದ್ದಾಗ ಪೊದೆಯೊಂದರಿಂದ ಹಠಾತ್ ಪ್ರತ್ಯಕ್ಷಗೊಂಡ ಹೆಬ್ಬಾವು ತನ್ನ ಹಿಂದಿನಿಂದ ಹಾರಿ ತಲೆಗೆ ಕುಟುಕಿದೆ, ಪರಿಣಾಮವಾಗಿ ನನ್ನ ಕೂದಲು ಕಿತ್ತುಕೊಂಡಿದೆ. ಅನಂತರ ಅದು ತನ್ನ ತಲೆಯಿಂದ ಜಾರಿ ಕೆಳಗೆ ಬೀಳುವ ಸಂದರ್ಭದಲ್ಲಿ ನನ್ನ ಎಡ ತೊಡೆಯನ್ನು ಕಚ್ಚಿದೆ ಎಂದು ವಿವರಿಸುತ್ತಾನೆ.
ತೊಡೆಯನ್ನು ಕಚ್ಚುತ್ತಿದ್ದಂತೆ ನಾನು ಎಡವಿ ನೆಲಕ್ಕೆ ಬಿದ್ದಿದ್ದು, ಹೆಬ್ಬಾವು ನನ್ನ ಕಾಲನ್ನು ಸುತ್ತಿಕೊಂಡು ತಲೆಯ ಭಾಗಕ್ಕೆ ಹೊಡೆಯಲು ಯತ್ನಿಸಿತ್ತು. ಈ ಸಂದರ್ಭದಲ್ಲಿ ನಾನು ನನ್ನ ಕೈಯನ್ನು ಅದರ ತೆಲೆಗೆ ಹೊಡೆಯಲು ಪ್ರಯತ್ನಿಸಿದಾಗ ನನ್ನ ಕೈ ಹೆಬ್ಬಾವಿನ ಬಾಯಿಯೊಳಗೆ ಪ್ರವೇಶಿಸಿದೆ. ಪರಿಣಾಮವಾಗಿ ತನ್ನ ಕೈ ಮೂರು ಬೆರಳುಗಳಿಗೆ ತೀವ್ರ ಗಾಯವಾಗಿ ರಕ್ತ ಸುರಿದಿದೆ. ಮತ್ತೆ ಮತ್ತೆ ಹೆಬ್ಬಾವು ತನ್ನನ್ನು ಸುತ್ತಿಕೊಳ್ಳಲು ಪ್ರಯತ್ನಿಸಿದಾಗ ನಾನು ಅಲ್ಲೇ ಹತ್ತಿರದಲ್ಲಿದ್ದ ಕಲ್ಲೊಂದನ್ನು ಎತ್ತಿ ಅದರ ಕಣ್ಣಿಗೆ ಹೊಡೆದಿದ್ದೇನೆ. ಅದರ ಕಣ್ಣು ಸಂಪೂರ್ಣ ಜಜ್ಜಿ ಹೋಗಿದ್ದು, ಅನಂತರ ಹೆಬ್ಬಾವು ನನ್ನನ್ನು ಬಿಟ್ಟು ತನ್ನ ಪಾಡಿಗೆ ಹೋಗಿದೆ ಎಂದು ವೈಶಾಖ್ ವಾರ್ತಾಭಾರತಿಯೊಂದಿಗೆ ನಡೆದ ಘಟನೆಯನ್ನು ವಿವರಿಸಿದ್ದಾನೆ.
ಈ ಮಧ್ಯೆ ನನ್ನ ದೊಡ್ಡಪ್ಪನ ಮಗಳು ಹರ್ಷಿತಾ ಕಾಲೇಜಿನಿಂದ ಅದೇ ಮಾರ್ಗವಾಗಿ ಬರುತ್ತಿದ್ದಾಗ ನಾನು ಜೋರಾಗಿ ‘‘ಇಲ್ಲಿ ಹೆಬ್ಬಾವು ಇದೆ.. ಬರಬೇಡ.. ದೂರ ಹೋಗು ಅಂದೆ. ಆದರೆ ಅವಳು ತಾನು ತಮಾಷೆ ಮಾತನಾಡುತ್ತಿದ್ದೇನೆಂದು ಭಾವಿಸಿ ಅವಳಷ್ಟಕ್ಕೇ ಹೋದಳು. ಹೆಬ್ಬಾವಿನ ಬಾಯಿಯಿಂದ ರಕ್ಷಿಸಿಕೊಂಡ ನಾನು ಹತ್ತಿರದ ನೆರೆಯ ಮನೆಯವರಲ್ಲಿ ನಡೆದ ಘಟನೆಯನ್ನು ವಿವರಿಸಿದೆ. ಈ ಸಂದರ್ಭದಲ್ಲಿ ನನ್ನ ಅಕ್ಕಳಿಗೆ (ಹರ್ಷಿತಾ) ನಾನು ಹೇಳುತ್ತಿರುವುದು ನಿಜ ತಿಳಿಯಿತು ಎಂದು 11ರ ಆ ಬಾಲಕ ವಿವರಿಸಿದ್ದಾನೆ.
ಅನಂತರ ಹರ್ಷಿತಾ ವೈಶಾಖ್‌ನನ್ನು ಎತ್ತಿಕೊಂಡು ಹೋಗಿದ್ದು, ಮನೆಯವರು ಧಾವಿಸಿ ಆತನನ್ನು ಬಿ.ಸಿ.ರೋಡ್‌ನ ಸೋಮಯಾಜಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಅವರು ಮತ್ತೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದಾಗ ಅವರು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಅದರಂತೆ ಹೆತ್ತವರು ನಗರದ ಕಂಕನಾಡಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಆತತನ್ನು ಮಕ್ಕಳ ತೀವ್ರ ನಿಗಾ ಘಟಕದಲ್ಲಿಸಿ ಚಿಕಿತ್ಸೆ ನೀಡಿದ್ದಾರೆ. ಬುಧವಾರ ಮಧ್ಯಾಹ್ನ ಬಳಿಕ ವೈಶಾಕ್‌ನನ್ನು ವಾರ್ಡ್‌ಗೆ ವರ್ಗಾಯಿಸಿದ್ದು, ವೈಶಾಖ್ ಇದೀಗ ಚೇತರಿಸಿಕೊಂಡಿದ್ದಾನೆ.
2,3 ಹೆಬ್ಬಾವುಗಳು ಪರಿಸರದಲ್ಲಿ ತಿರುಗಾಡುತ್ತಿರುತ್ತವೆ: ಬಾಲಕನ ತಂದೆ
ನಾವು ವಾಸಿಸುವ ಪರಿಸರದ ಸುತ್ತಮುತ್ತ ಕೆಲವು ದಿನಗಳಿಂದ 2ರಿಂದ ಮೂರು ಹೆಬ್ಬಾವುಗಳನ್ನು ಕಂಡಿದ್ದೇವೆ. ಅದು ಮನುಷ್ಯರನ್ನು ನುಂಗುವಷ್ಟು ದೊಡ್ಡದಾಗಿ ಬೆಳೆದುಕೊಂಡಿದೆ. ರಾತ್ರಿ ಸಮಯದಲ್ಲಿ ಪರಿಸರದಲ್ಲಿ ಸಂಚರಿಸಲು ಹೆದರಿಕೆಯಾಗುತ್ತದೆ ಎಂದು ಸುರೇಶ್ (42) ಹೇಳುತ್ತಾರೆ.
2 ವರ್ಷಗಳ ಹಿಂದೆ ಚಿರತೆಯೊಂದು ಪ್ರತ್ಯಕ್ಷವಾಗಿತ್ತು!
ಪರಿಸರದ ಕಂಡಿನಡ್ಕಪದವು ಎಂಬಲ್ಲಿ ಎರಡು ವರ್ಷಗಳ ಹಿಂದೆ ಚಿರತೆಯೊಂದು ಪ್ರತ್ಯಕ್ಷವಾಗಿತ್ತು. ಇದರಿಂದಾಗಿ ಜನರು ರಾತ್ರಿ ವೇಳೆಯಲ್ಲಿ ನಡೆದಾಡಲು ಹಿಂಜರಿಸುತ್ತಿದ್ದರು. ಈಗಲೂ ಪರಿಸರದಿಂದ ಹಾದು ಹೋಗುವಾದ ಹೆದರಿಕೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಗನ ಅವಸ್ಥೆ ನೋಡಿ ಗಾಬರಿಯಾಯಿತು!
ಕೈ, ಕಾಲುಗಳಿಂದ ರಕ್ತ ಸೋರುತ್ತಿರುವುದನ್ನು ನೋಡಿ ತುಂಬಾ ದುಃಖವಾಯಿತು. ಅದೂ ಹೆಬ್ಬಾವು ದಾಳಿಯಿಂದ ಎಂದು ಹೇಳಿದಾಗ ಮನಸ್ಸಿಗೆ ತುಂಬಾ ನೋವಾಯಿತು ಎಂದು ಸುರೇಶ್ ತಿಳಿಸಿದ್ದಾರೆ.
ಜೀವನ ನಿರ್ವಹಣೆಗೆ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ಸುರೇಶ್ 9 ತಿಂಗಳ ಹಿಂದೆ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಮೇಲಿನಿಂದ ಬಿದ್ದಿದ್ದರು. ಪರಿಣಾಮವಾಗಿ ಅವರು ಕಾಲಿನ ಮೂಳೆ ಮುರಿತಕ್ಕೊಳಗಾಗಿ ಸುಮಾರು 9 ತಿಂಗಳ ಕಾಲ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದರು. ಇದೀಗ ಕಳೆದ ಒಂದು ವಾರದಿಂದ ಕೆಲಸಕ್ಕೆ ಹೋಗುತ್ತಿರುವುದಾಗಿ ಸುರೇಶ್ ಪತ್ರಿಕೆಗೆ ತಿಳಿಸಿದ್ದಾರೆ.







