ಕಾರು-ಲಾರಿ ಢಿಕ್ಕಿ: ತಾಯಿ-ಮಗ ಮೃತ್ಯು

ಕಾರ್ಕಳ, ಅ.5: ಭತ್ತದ ಕಟಾವು ಯಂತ್ರವನ್ನು ಹೇರಿಕೊಂಡು ಸಾಗುತ್ತಿದ್ದ ಲಾರಿ ಹಾಗೂ ನ್ಯಾನೋ ಕಾರು ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ತಾಯಿ ಮತ್ತು ಮಗ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ನಿಟ್ಟೆಯಲ್ಲಿ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಸಂಭವಿಸಿದೆ.
ತಾಲೂಕಿನ ಮಿಯಾರು ಗ್ರಾಮದ ಜೋಡುಕಟ್ಟೆ ನಿವಾಸಿ ಗ್ಲೊರಿಯಾ ಓಯಿಲ್ ಮಿಲ್‌ನ ಮಾಲಕ ವಾಲ್ಟರ್ ಡಿಸೋಜ ಅವರ ಪತ್ನಿ ಶಾಲೆಟ್ ಡಿಸೋಜ(45) ಹಾಗೂ ಅವರ ಪುತ್ರ ವಿನ್ಸನ್ ಡಿಸೋಜ (21) ಮೃತಪಟ್ಟ ದುರ್ದೈವಿಗಳು.
ಭತ್ತದ ಕಟಾವು ಯಂತ್ರವನ್ನು ಹೇರಿಕೊಂಡು ಕಾರ್ಕಳದಿಂದ ಪಡುಬಿದ್ರೆ ಮಾರ್ಗವಾಗಿ ಮಂಗಳೂರಿನತ್ತ ತೆರಳುತ್ತಿದ್ದ ಲಾರಿಯು ಬೆಳ್ಮಣ್ ಕಡೆಯಿಂದ ಕಾರ್ಕಳದತ್ತ ಬರುತ್ತಿದ್ದ ನ್ಯಾನೋ ಕಾರಿಗೆ ನಿಟ್ಟೆಯ ಲೆಮಿಲಾ ಕ್ರಾಸ್ ಸಮೀಪ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದೆ.
ಇವರು ಕಳೆದ ನಾಲ್ಕು ತಿಂಗಳ ಹಿಂದೆ ಖರೀದಿಸಿದ ನ್ಯಾನೋ ಕಾರನ್ನು ಮಂಗಳೂರಿನ ಶೋರೂಂನಲ್ಲಿ ಸರ್ವೀಸ್‌ಗಿಟ್ಟಿದ್ದು, ಸರ್ವೀಸ್ ಮುಗಿಸಿ ಕಾರ್ಕಳಕ್ಕೆ ಹಿಂದಿರುಗುತ್ತಿದ್ದರು. ಈ ಸಂದರ್ಭ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜು-ಗುಜ್ಜಾಗಿದ್ದು ಮೃತದೇಹಗಳು ಕಾರಿನ ಒಳಗೆ ಸಿಲುಕಿ ಮುದ್ದೆಯಾಗಿದ್ದವು. ಜೆಸಿಬಿ ಮೂಲಕ ಕಾರನ್ನು ಒಡೆದು ತೆಗೆದು ಮೃತದೇಹಗಳನ್ನು ಸ್ಥಳೀಯರ ಸಹಕಾರದಿಂದ ಹೊರತೆಗೆಯಲಾಯಿತು. ಘಟನೆಯಿಂದಾಗಿ ಕಾರ್ಕಳ -ಪಡುಬಿದ್ರೆ ಚತುಷ್ಪಥ ರಸ್ತೆಯಲ್ಲಿ ಸುಮಾರು ಮುಕ್ಕಾಲು ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತಗೊಂಡಿತ್ತು.
ಮೃತ ವಿನ್ಸನ್ ಡಿಸೋಜ ಇತ್ತೀಚೆಗಷ್ಟೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಗುಜರಾತ್‌ನ ಕ್ಯಾಪ್ಟನ್ ಟ್ರ್ಯಾಕ್ಟರ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದು ಕಳೆದ ಒಂದೂವರೆ ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ವಸತಿ ಸೌಲಭ್ಯ ಸರಿಯಿಲ್ಲದ ಕಾರಣ ಉದ್ಯೋಗ ತ್ಯಜಿಸಿ ಊರಿಗೆ ಮರಳಿದ್ದರು ಎಂದು ತಿಳಿದುಬಂದಿದೆ.
ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಈ ರಸ್ತೆ ಚತುಷ್ಪಥವಾದಂದಿನಿಂದ ಹಲವು ಅಪಘಾತಗಳು ನಡೆದಿದ್ದು ಈ ತನಕ ಹಲವಾರು ಮಂದಿ ಜೀವ ತೆತ್ತಿದ್ದಾರೆ. ಚತುಷ್ಪಥಗೊಂಡಿದ್ದರೂ ಈ ರಸ್ತೆಯಲ್ಲಿ ವಿಭಜಕ ಅಳವಡಿಸದೇ ಇರುವುದು ಜೊತೆಗೆ ತಿರುವು ಮುರುವು ರಸ್ತೆಯನ್ನು ನೇರಗೊಳಿಸದೆ ಚತುಷ್ಪಥವಾಗಿ ರಚಿಸಿರುವ ಪರಿಣಾಮ ವಿಪರೀತ ಅಪಘಾತಗಳು ನಡೆಯುತ್ತಲೇ ಇವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.







