ಮಗಳು ಐಸಿಯುನಲ್ಲಿದ್ದರೂ ಶಮಿ ಕೋಲ್ಕತಾ ಟೆಸ್ಟ್‌ನಲ್ಲಿ ಆಡಿದ್ದರು...!

ಕೋಲ್ಕತಾ, ಅ.5: ಅತ್ತ ಹದಿನಾಲ್ಕು ತಿಂಗಳ ಮಗಳು ಐರಾ ತೀವ್ರ ಉಸಿರಾಟದ ತೊಂದರೆಯಿಂದ ಕೋಲ್ಕತಾ ಆಸ್ಪತ್ರೆಯೊಂದರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಇತ್ತ ಅಪ್ಪ ಶಮಿ ಈಡನ್ ಗಾರ್ಡನ್ಸ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಎರಡನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಉರಿಚೆಂಡಿನ ದಾಳಿ ನಡೆಸಿದ್ದರು.
ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಅವರ ಮಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ತಾನು ಟೆಸ್ಟ್‌ನಲ್ಲಿ ಆಡುವುದರಿಂದ ದೂರ ಉಳಿಯಲಿಲ್ಲ. ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದರು. ತನ್ನ ಮಗಳು ಐಸಿಯುನಲ್ಲಿದ್ದರೂ ಕೋಲ್ಕತಾದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಕ್ರಿಕೆಟ್‌ನಲ್ಲಿ ನನಗೆ ನೀಡಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದರು.
ಟೆಸ್ಟ್‌ನ ಎರಡನೆ ದಿನ ಶಮಿ ಅವರ ಮಗಳು ಐರಾಳಿಗೆ ತೀವ್ರ ಜ್ವರ ಕಾಣಿಸಿಕೊಂಡಿತು. ಉಸಿರಾಟದ ತೊಂದರೆ ಎದುರಿಸುತ್ತಿದ್ದ ಮಗುವನ್ನು ಕೋಲ್ಕತಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಟ ಮುಗಿದ ಬಳಿಕ ಶಮಿ ಮಗಳನ್ನು ನೋಡಲು ಆಸ್ಪತ್ರೆಗೆ ಹೋಗಿದ್ದರು.
ಟೆಸ್ಟ್‌ನ ಮೂರನೆ ದಿನ ಶಮಿ ನ್ಯೂಝಿಲೆಂಡ್‌ನ ಬಾಲ ಕತ್ತರಿಸಿದ್ದರು. ನ್ಯೂಝಿಲೆಂಡ್‌ನ್ನು ಮೊದಲು ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ನೆರವಾಗಿದ್ದರು.70ಕ್ಕೆ 3 ವಿಕೆಟ್ ಉಡಾಯಿಸಿದ್ದರು. ಭಾರತ ಮೊದಲ ಇನಿಂಗ್ಸ್‌ನಲ್ಲಿ 112 ರನ್‌ಗಳ ಮುನ್ನಡೆ ಸಾಧಿಸಿತ್ತು. ಪ್ರತಿದಿನ ಆಟ ಮುಗಿದ ಬಳಿಕ ಶಮಿ ಮಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಹೋಗಿ ರಾತ್ರಿ ವೇಳೆಗೆ ತಂಡದ ಸದಸ್ಯರಿರುವ ಹೋಟೆಲ್‌ಗೆ ವಾಪಸಾಗುತ್ತಿದ್ದರು.
ಶಮಿ ಎರಡನೆ ಇನಿಂಗ್ಸ್‌ನಲ್ಲಿ ತನ್ನ ರಿವರ್ಸ್ ಸ್ವಿಂಗ್ ಮೂಲಕ ನ್ಯೂಝಿಲೆಂಡ್‌ನ ಆಟಗಾರರನ್ನು ಕಾಡಿದ್ದರು. 86ಕ್ಕೆ 3 ವಿಕೆಟ್ ಪಡೆದಿದ್ದರು. ಒಟ್ಟು 6 ವಿಕೆಟ್‌ಗಳನ್ನು ಅವರು ಕಬಳಿಸಿದ್ದರು.
ನ್ಯೂಝಿಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಭಾರತದ ಪಾಲಿಗೆ ತವರಿನಲ್ಲಿ ನಡೆದ 250ನೆ ಟೆಸ್ಟ್ ಆಗಿತ್ತು. ಇದರಲ್ಲಿ 178 ರನ್‌ಗಳ ಗೆಲುವು ದಾಖಲಿಸಿದ ಭಾರತ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಳ್ಳುವ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಸಾನ ಪಡೆದಿತ್ತು. ಶಮಿ ಮೂಲತಃ ಉತ್ತರಪ್ರದೇಶದವರು. ಆದರೆ ಅವರಿಗೆ ಕೋಲ್ಕತಾದ ಈಡನ್ ಗಾರ್ಡನ್ಸ್ ತವರಿನ ಕ್ರೀಡಾಂಗಣವಾಗಿದೆ. ಇಲ್ಲಿಯೇ ದೇಶಿಯ ಕ್ರಿಕೆಟ್‌ನಲ್ಲಿ ಆಡಿ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿದ್ದರು. ಈಡನ್ ಗಾರ್ಡನ್ಸ್‌ನಲ್ಲಿ 2013ರಲ್ಲಿ ನ.6ರಿಂದ 8ರ ತನಕ ನಡೆದ ವಿಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಅವರು ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ರಂಗ ಪ್ರವೇಶಿಸಿದ್ದರು. ಚೊಚ್ಚಲ ಟೆಸ್ಟ್‌ನಲ್ಲಿ ಎರಡೂ ಇನಿಂಗ್ಸ್‌ನಲ್ಲಿ 9 ವಿಕೆಟ್ ಪಡೆದಿದ್ದರು. ಭಾರತ ಇನಿಂಗ್ಸ್ ಹಾಗೂ 51 ರನ್‌ಗಳ ಜಯ ಗಳಿಸಿತ್ತು. ಇವರ ಜೊತೆಗೆ ಮೊದಲ ಟೆಸ್ಟ್ ಆಡಿದ ರೋಹಿತ್ ಶರ್ಮ ಶತಕ(177) ದಾಖಲಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ‘‘ ನನ್ನ ನಾಯಕ ಪ್ರತಿದಿನವೂ ಆಸ್ಪತ್ರೆಯಿಂದ ಬರುವಾಗ ವಿಚಾರಿಸಿ ನನಗೆ ಧೈರ್ಯ ತುಂಬುತ್ತಿದ್ದರು. ಅವರಿಗೆ ಹಾಗೂ ತಂಡದ ಸಹ ಆಟಗಾರರಿಗೆ ನಾನು ಚಿರ ಋಣಿಯಾಗಿರುವೆ. ಅವರೆಲ್ಲ ಟೆಸ್ಟ್ ಮುಗಿಯುವ ಹೊತ್ತಿಗೆ ಮಗಳು ಚೇತರಿಸಿಕೊಳ್ಳುವ ವಿಶ್ವಾಸ ಮೂಡಿಸಿದ್ದರು’’ ಎಂದು ಶಮಿ ಹೇಳಿದ್ದಾರೆ.
ಶಮಿ ಅವರನ್ನು ಟಿವಿ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಶ್ಲಾಘಿಸಿದ್ದರು. ‘‘ ಮಗಳು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಶಮಿ ಉತ್ತಮವಾಗಿ ಬೌಲಿಂಗ್ ನಡೆಸಿದರು. ಅವರು ಒತ್ತಡದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಚೆನ್ನಾಗಿ ಆಡಿದರು ’’ ಎಂದು ಮಾಂಜ್ರೇಕರ್ ಶ್ಲಾಘಿಸಿದ್ದರು.
ಶಮಿ ಮಗಳು ಅ.3ರಂದು ಚೇತರಿಸಿಕೊಂಡು ಮನೆಗೆ ಮರಳಿದಳು. ಅದೇ ದಿನ ಟೆಸ್ಟ್ ಪಂದ್ಯ ಮುಕ್ತಾಯಗೊಂಡಿತ್ತು.







