‘ಬ್ಯಾರಿ’ ಈ ನೆಲದ ಭಾಷೆ : ಎ.ಸಿ. ಭಂಡಾರಿ

ಮಂಗಳೂರು, ಅ.5: ಬ್ಯಾರಿ ಈ ನೆಲದ ಭಾಷೆ. ಅದು ಎಂದಿಗೂ ವಲಸೆ ಭಾಷೆಯಲ್ಲ. ಬ್ಯಾರಿಯಲ್ಲಿ ಈ ಮಣ್ಣಿನ ಸೊಗಡಿದೆ. ಅದನ್ನು ಉಳಿಸಿ ಬೆಳೆಸಲು ನಿರಂತರ ಪ್ರಯತ್ನ ಮಾಡಬೇಕಾಗಿದೆ. ಅದಕ್ಕಾಗಿ ಅಕಾಡಮಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಿರುವುದು ಶ್ಲಾಘನಾರ್ಹ ಎಂದು ಅಖಿಲ ಭಾರತ ತುಳು ಒಕ್ಕೂಟದ ಗೌರವ ಸಲಹೆಗಾರ ಎ.ಸಿ.ಭಂಡಾರಿ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಬ್ಯಾರಿ ಬಾಷಾ ಸಪ್ತಾಹದ ಅಂಗವಾಗಿ ಅಕಾಡಮಿಯ ಕಛೇರಿಯಲ್ಲಿ ಬುಧವಾರ ಆಯೋಜಿಸಿದ್ದ ‘ಬ್ಯಾರಿ ಗಾದೆ ಹೇಳುವ ಮತ್ತು ಚುಟುಕು ವಾಚನ’ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಹಿಂದ ಜನ ಚಳವಳಿಯ ದ.ಕ.ಜಿಲ್ಲಾ ಉಪಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕಂದಕ್ ಸ್ಪರ್ಧೆಗೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಅಖಿಲ ಬಾರತ ಬ್ಯಾರಿ ಪರಿಷತ್‌ನ ಉಪಾಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ ಭಾಗವಹಿಸಿ ಶುಭಹಾರೈಸಿದರು.
ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ಅಧ್ಯಕ್ಷತೆ ವಹಿಸಿದ್ದರು. ಅಕಾಡಮಿಯ ಮಾಜಿ ಸದಸ್ಯ ಖಾಲಿದ್ ಉಜಿರೆ ಗಾದೆ ಹೇಳುವ ಮತ್ತು ಚುಟುಕು ವಾಚನದ ಮಾದರಿಯ ಬಗ್ಗೆ ಮಾಹಿತಿ ನೀಡಿದರು.
ಅಕಾಡಮಿಯ ಸದಸ್ಯರಾದ ಅಬ್ದುಲ್ ಹಮೀದ್ ಗೋಳ್ತಮಜಲು ಸ್ವಾಗತಿಸಿದರು. ಮುಹಮ್ಮದ್ ಝಕರಿಯ ಕಲ್ಲಡ್ಕ ವಂದಿಸಿದರು. ಯೂಸುಫ್ ವಕ್ತಾರ್ ಕಾರ್ಯಕ್ರಮ ನಿರೂಪಿಸಿದರು.







