ಗ್ರಾಮೀಣ ಅಂಚೆ ನೌಕರರ ಬೋನಸ್ ಮಿತಿ ಏರಿಕೆಗೆ ಆಗ್ರಹಿಸಿ ಧರಣಿ

ಉಡುಪಿ, ಅ.5: ಗ್ರಾಮೀಣ ಅಂಚೆ ಇಲಾಖೆಯ ನೌಕರರ ಬೋನಸ್ ಮಿತಿಯನ್ನು 3,500 ರೂ.ನಿಂದ 7ಸಾವಿರ ರೂ.ಗೆ ಹೆಚ್ಚಿಸುವಂತೆ ಹಾಗೂ ವೇತನ ಆಯೋಗದ ವರದಿಯನ್ನು ಶೀಘ್ರವೇ ಜಾರಿಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಉಡುಪಿ ವಿಭಾಗ ಬುಧವಾರ ಉಡುಪಿಯ ಪ್ರಧಾನ ಅಂಚೆ ಕಚೇರಿ ಎದುರು ಧರಣಿ ನಡೆಸಿತು.
ಕೇಂದ್ರ ಸರಕಾರ ಕೇಂದ್ರ ಸರಕಾರಿ ನೌಕರರ ಹಿತರಕ್ಷಣೆಗಾಗಿ ಬೋನಸ್ ಮಿತಿಯನ್ನು 7ಸಾವಿರ ರೂ.ಗೆ ಏರಿಸಿ ಆದೇಶ ನೀಡಿದ್ದು, ಆದರೆ ಅಂಚೆ ಇಲಾಖೆಯು ಇದನ್ನು ಇಲಾಖಾ ನೌಕರರಿಗೆ ಮಾತ್ರ ನೀಡಿ, ಬಡ ಗ್ರಾಮೀಣ ಅಂಚೆ ನೌಕರರಿಗೆ ನೀಡದೆ ಶೋಷಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಬಸವ ಬಿಲ್ಲವ ದೂರಿದರು.
ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಬೋಸನ್ ಮಿತಿಯನ್ನು ಗ್ರಾಮೀಣ ನೌಕರರಿಗೂ ನೀಡಿ 2014-15ರ ಸಾಲಿನ ಹಿಂಬಾಕಿಯನ್ನು ಕೂಡ ಶೀಘ್ರವೇ ಜಾರಿಗೊಳಿಸಲು ಇಲಾಖಾ ವರಿಷ್ಠರಿಗೆ ಆದೇಶ ನೀಡಬೇಕು ಮತ್ತು ಗ್ರಾಮೀಣ ಅಂಚೆ ನೌಕರರ ವೇತನ ಆಯೋಗದ ವರದಿ ಶೀಘ್ರ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಧರಣಿಯಲ್ಲಿ ಸಂಘದ ಕಾರ್ಯದರ್ಶಿ ಸಂತೋಷ್ ಮಧ್ಯಸ್ಥ, ಕೋಶಾಧಿ ಕಾರಿ ರಮಾನಾಥ ಆರ್.ಮೊಲಿ ಮೊದಲಾದವರು ಉಪಸ್ಥಿತರಿದ್ದರು.





