ಚಲೋ ಉಡುಪಿ: ಹೊಳೆನರಸಿಪುರದಲ್ಲಿ ಮಾನವ ಸರಪಳಿ

ಹೊಳೆನರಸಿಪುರದಲ್ಲಿ ಮೆರವಣಿಗೆ ನಡೆಸಿದ ಚಲೋ ಉಡುಪಿ ಸ್ವಾಭಿಮಾನಿ ಸಂಘರ್ಷ ಜಾಥಾ ನಂತರ ನಗರದ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಚಲೋ ಉಡುಪಿ ಉದ್ದೇಶವನ್ನು ಸಾರಲಾಯಿತು.
ಭೀಮಜ್ಯೋತಿ ಹಿಡಿದು ಬನ್ನಿ ಕ್ರಾಂತಿ ಕಹಳೆ ಮೊಳಗಿದೆ, ಹೆಜ್ಜೆಗಳೆಲ್ಲ ಕಡಲಿನೂರಿಗೆ ಹೊರಟಿವೆ, ಆಕಾಶ ನೀಲಿಯಾಗಿ ನಕ್ಷತ್ರ ಕಾಣುತ್ತಿಲ್ಲ ಮುಂತಾದ ಹೋರಾಟದ ಹಾಡುಗಳೊಂದಿಗೆ ಬಹಿರಂಗ ಕಾರ್ಯಕ್ರಮ ಆರಂಭವಾಯಿತು..
ಪ್ರಸ್ತಾವಿಕ ಮಾತನ್ನಾಡಿದ ಉಡುಪಿ ಚಲೋ ಸಂಚಾಲಕರಲ್ಲೊಬ್ಬರಾದ ವಿಕಾಸ್ ಆರ್. ಮೌರ್ಯ, ಹಿಂದೂ ಮೂಲಭೂತ ಮೊದಲು ಮುಸ್ಲಿಮರನ್ನು, ನಂತರ ದಲಿತರನ್ನು ನಂತರ ಹಿಂದುಳಿದ ವರ್ಗದವರನ್ನು ಕಟ್ಟ ಕಡೆಯದಾಗಿ ಪ್ರಗತಿಪರ ಬ್ರಾಹ್ಮಣರನ್ನು ಬಲಿ ತೆಗೆದುಕೊಳ್ಳುತ್ತದೆ ಎಂದು 9 ವರ್ಷದ ಹಿಂದೆಯೇ ದೇವನೂರು ಮಹಾದೇವ ಹೇಳಿದ್ದರು, ಆದರೆ ನಾವು ಎಚ್ಚೆತ್ತುಕೊಳ್ಳದಿರುವುದರಿಂದ ಇಂದಿಗೂ ದೌರ್ಜನ್ಯ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಜ್ಜಾರ್ ನಲ್ಲಿ ಮುಸ್ಲಿಂರನ್ನು ಕೊಂದ ಸನಾತನವಾದಿಗಳು ಬಾಬ್ರಿನಲ್ಲಿ ಎರಡು ಸಾವಿರ ಜನರನ್ನು ಸಾಯಿಸಿದ್ದಲ್ಲದೇ ಕಳೆದ ವರ್ಷ ದಾದ್ರಿಯಲ್ಲಿ ಅಕ್ಲಾಖ್ ನನ್ನು ಕೊಂದು ಬಿಟ್ಟಿದ್ದಾರೆ ಈಗಲಾದರೂ ಎಚ್ಚೆತ್ತುಕೊಳ್ಳೋಣ ಎಂದರು. ಇದು ಕೇವಲ ದಲಿತರ ಹೋರಾಟವಲ್ಲ, ನಾವು ಮರ್ಯಾದೆ ಹೀನ ಹತ್ಯೆಯನ್ನು, ಪಂಕ್ತಿಭೇಧವನ್ನು, ಮಡೆಸ್ನಾನವನ್ನು ಖಂಡಿಸುತ್ತೇವೆ ಇದು ಎಲ್ಲಾ ಜಾತಿಯ ಬಡವರ ಹೋರಾಟವಾಗಿದೆ ಎಂದರು.
ಇಲ್ಲಿಯವರೆಗೆ ದನದ ಮಾಂಸ ಮಾರುತ್ತಾರೆ ಎಂದು ಮುಸ್ಲಿಂರನ್ನು, ದನವನ್ನು ಸುಲಿಯುತ್ತಾರೆ ಎಂದು ದಲಿತರನ್ನು, ದನವನ್ನು ಸಾಗಾಣಿಕೆ ಮಾಡುವ ಹಿಂದುಳಿದ ವರ್ಗದವರನ್ನು ಕೊಂದಿದ್ದಾರೆ. ನಂತರ ಇವರು ದನ ಸಾಕಿ ಮಾರುವ ರೈತರನ್ನು ಸಹ ಕೊಲ್ಲಲಿದ್ದಾರೆ ಇದನ್ನು ತಡೆಯೋಣ ಎಂದರು. ಹಾಗಾಗಿ ಆಹಾರದ ನಮ್ಮ ಆಯ್ಕೆಗಾಗಿ ಹೋರಾಡುವುದು ಅನಿವಾರ್ಯವಾಗಿದೆ ಎಂದರು.
ಮೇಲ್ಜಾತಿಗಳು ಕಡಿಮೆ ಇದ್ದರೂ ಅವರು 73% ಭೂಮಿ ಹೊಂದಿದ್ದಾರೆ. ಆದರೆ ಬಹುಸಂಖ್ಯಾತರಾದ ದಲಿತರು ಕೇವಲ 13% ಇತರೆ ಹಿಂದುಳಿದ ವರ್ಗದವರು ಕೇವಲ 14% ಮಾತ್ರ ಭೂಮಿ ಹೊಂದಿದ್ದು ದೇವರಾಜು ಅರಸರ ಭೂ ಸುಧಾರಣೆ ಸರಿಯಾಗಿ ಜಾರಿಯಾಗಿಲ್ಲ. ಹಾಗಾಗಿ ನಾವು ಭೂ ವಂಚಿತ ಪ್ರತಿ ಕುಟುಂಬಕ್ಕೆ 5 ಎಕರೆ ಭೂಮಿ ಕೊಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದರು. ದನಗಳಿಗಾಗಿ ಜನಗಳನ್ನು ಕೊಲ್ಲುತ್ತಿದ್ದಾರೆ. ಜನಗಳು ಉಳಿಯಬೇಕೋ ದನಗಳು ಉಳಿಯಬೇಕೋ ಎಂಬ ಪರಿಸ್ಥಿತಿ ಬಂದರೆ ಜನಗಳನ್ನು ಉಳಿಸಿಕೊಳ್ಳಲು ನಾವೆಲ್ಲರೂ ಮುಂದಾಗೋಣ ಎಂದು ಕರೆ ನೀಡಿದರು.
ನಂತರ ಮಾತನಾಡಿದ ಅಬ್ದುಲ್ ಸಮದ್, 80 ರ ದಶಕದ ದಸಂಸದ ಚಹರೆ ಮತ್ತು ಕೆಚ್ಚು ಈ ಜಾಥದಲ್ಲಿ ಕಾಣುತ್ತಿದೆ. ನ್ಯಾಯ ಪಡೆಯಲು ಪಣತೊಟ್ಟಿರುವ ಜಾಥದ ಸಹೋದರ ಸಹೋದರಿಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಹಿಂದುಳಿದ ವರ್ಗ ಮತ್ತು ಮುಸ್ಲಿಂ ರನ್ನು ಸಂಘಟಿಸಬೇಕು ಎಂದು 20 ವರ್ಷದ ಹಿಂದೆಯೇ ಅಂದುಕೊಂಡಿದ್ದೆವು. ಆದರೆ ಈಗ ಈ ಜಾಥದ ಮೂಲಕ ನಾವೆಲ್ಲ ಒಂದಾಗಿ ಕೋಮುವಾದಿಗಳನ್ನು ಹಿಮ್ಮೆಟ್ಟಿಸಿ ಉಡುಪಿ ಚಲೋ ಮೂಲಕ ಇತಿಹಾಸ ಸೃಷ್ಠಿಸೋಣ ಎಂದರು.
ಗುಜರಾತ್ ನಲ್ಲಿನ ಮುಸ್ಲಿಂರ ಮೇಲಿನ ದಾಳಿ ವಿರೋಧಿಸಿ, ಮಂಡಲ್ ಆಯೋಗದ ಹಿಂದುಳಿದ ವರ್ಗದವರಿಗೆ ಮೀಸಲಾತಿ ಜಾರಿಗಾಗಿ ಹೋರಾಡಿದ್ದೆವು. ಮತ್ತು ಬಾಬ್ರಿ ಮಸೀದಿ ಧ್ವಸಂದ ವಿರುದ್ಧ ಹೋರಾಡಿದ್ದೇವೆ. ಈಗ ಅಂತದ್ದೇ ದೊಡ್ಡ ಹೋರಾಟದ ಹೊಸ ಯುಗ ಆರಂಭವಾಗಿದೆ ಅದನ್ನು ಬೆಂಬಲಿಸೋಣ ಎಂದರು.
ಆಹಾರದ ಹಕ್ಕು ಸಂವಿಧಾನದತ್ತ ಆಯ್ಕೆಯಾಗಿದ್ದು ಭೂಮಿ ನಮ್ಮ ಹಕ್ಕಾಗಿದೆ ಇದಕ್ಕಾಗಿ ಹೋರಾಡಲು ಉಡುಪಿಗೆ ಬರುತ್ತೇವೆ ಎಂದು ಭರವಸೆ ನೀಡಿದರು. ಮುಸ್ಲಿಂ ರನ್ನು ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ಆಗಿ ಬಳಸಿ ಬಿಸಾಕುತ್ತಿದ್ದಾರೆ ಮುಸ್ಲಿಮರು ಅರಿತು ಅದನ್ನು ಬಿಟ್ಟು ದಲಿತರೊಂದಿಗೆ ಸೇರಬೇಕು ಮತ್ತು ಸಂವಿಧಾನ ಉಳಿಸಲು ಹೋರಾಟಕ್ಕೆ ಮುಂದಾಗೋಣ ಎಂದರು.
ಕಾರ್ಯಕ್ರಮದಲ್ಲಿ ರೋಹಿತ್ ವೇಮುಲಾ, ಅಖ್ಲಾಖ್, ಕಲ್ಬುರ್ಗಿ, ಪ್ರವೀಣ್ ಪೂಜಾರಿ ಯನ್ನು ಮೂಲಭೂತಿವಾದಿಗಳ ಕಾರಣದಿಂದ ಕಳೆದುಕೊಂಡಿದ್ದರ ಕಾರಣದಿಂದ ಅವರಿಗಾಗಿ ಒಂದು ನಿಮಿಷದ ಮೌನಾಚರಣೆ ಆಚರಿಸಲಾಯಿತು.
ಸಿಗರನಹಳ್ಳಿ ಹೋರಾಟದ ತಾಯಮ್ಮ, ಎನ್ ವೆಂಕಟೇಶ್, ಮಲ್ಲಿಗೆ, ಯೂಸಪ್ ಷರೀಪ್, ಕುಪ್ಪೆ ಉಮೇಶ್, ಎಂ ಸೋಮಶೇಖರ್, ಲಕ್ಕೂರು ಬಸವರಾಜು, ವಿಜಯ್ ಕುಮಾರ್, ಪೃಥ್ವಿ, ಸತೀಶ್, ಡಿ.ಕೆ ಕುಮಾರಯ್ಯ, ರೆಹಮಾನ್, ನಾಗೇಂದ್ರ, ಭಾಸ್ಕರ್ ಪ್ರಸಾದ್, ಮುಭಾಶಿರ್, ಲಕ್ಷ್ಮಣ್ ವೇದಿಕೆಯಲ್ಲಿದ್ದರು.







