ರಾಜ್ಯದಲ್ಲಿ ಈ ಬಾರಿ ಬರಪೀಡಿತ ತಾಲೂಕುಗಳು ಎಷ್ಟಿವೆ ಗೊತ್ತೇ?

ಬೆಂಗಳೂರು,ಅ.5: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಿಂದಾಗಿ ಹಿಂಗಾರು ಆರಂಭಕ್ಕೂ ಮುನ್ನವೇ ರಾಜ್ಯದ ಮುಕ್ಕಾಲು ಭಾಗ ಬರಪೀಡಿತವಾಗಿವೆ. 176 ತಾಲೂಕುಗಳ ಪೈಕಿ 110 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ.
ರಾಜ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಬೆಳೆ ಹಾನಿಯ ಅಂದಾಜು ಮಾಡಿ ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 13 ಜಿಲ್ಲೆಗಳ 42 ತಾಲೂಕುಗಳನ್ನು ಬರ ಪೀಡಿತ ಎಂದು ಪ್ರಕಟಿಸಲಾಗಿದೆ. ಈ ಮುನ್ನ 68 ತಾಲೂಕುಗಳನ್ನು ಈ ಮೊದಲೇ ಬರಪೀಡಿತ ಎಂದು ಪ್ರಕಟಿಸಲಾಗಿದೆ. ತುಮಕೂರು ಜಿಲ್ಲೆಯ ಹತ್ತೂ ತಾಲೂಕುಗಳನ್ನು ಬರ ಪೀಡಿತ ಎಂದು ಪ್ರಕಟಿಸಿರುವುದು ರಾಜ್ಯದಲ್ಲಿರುವ ಅಭಾವ ಪರಿಸ್ಥಿತಿಯ ಭೀಕರತೆಯನ್ನು ಅನಾವರಣಗೊಳಿಸುತ್ತದೆ.
ಕರಾವಳಿ ಭಾಗದ ಹೊರತುಪಡಿಸಿದರೆ ಉಳಿದ ಎಲ್ಲಾ ಜಿಲ್ಲೆಗಳ ಬಹುತೇಕ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಮುಂಗಾರು ವಿಫಲವಾಗಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರದ ಮಾರ್ಗಸೂಚಿಗಳನ್ವಯ ಸತತವಾಗಿ ನಾಲ್ಕು ವಾರಗಳ ಕಾಲ ಶೇಕಡಾ 50 ಕ್ಕಿಂತಲೂ ಕಡಿಮೆ ತೇವಾಂಶ ಹೊಂದಿರುವ ಹಾಗೂ ಶೇಕಡಾ 20 ಕ್ಕಿಂತಲೂ ಮಳೆ ಕೊರತೆಯಾಗಿರುವ ಮಾನದಂಡಗಳನ್ನು ಆಧರಿಸಿ 13 ಜಿಲ್ಲೆಗಳ 42 ತಾಲೂಕುಗಳನ್ನು ರಾಜ್ಯ ಸಚಿವ ಸಂಪುಟವು ಬರ ಪೀಡಿತ ಎಂದು ಘೋಷಿಸಿದೆ.
ಸಂಪುಟ ಸಭೆಯ ನಂತರ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಟಿ. ಬಿ. ಜಯಚಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಾರ ಹೈದಾರಬಾದ್-ಕರ್ನಾಟಕ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ. ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದಾಗಿರುವ ಹಾನಿಯ ಅಂದಾಜು ಕುರಿತು ಎರಡು ಪ್ರಸ್ತಾವನೆಗಳನ್ನು ಸಿದ್ದಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ. ಸೂಕ್ತ ಪರಿಹಾರ ಒದಗಿಸುವಂತೆ ಕೋರಿ ಶೀಘ್ರದಲ್ಲಿಯೇ ಎರಡೂ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಕಳುಹಿಸಲು ಸಂಪುಟ ಸಮ್ಮತಿಸಿದೆ ಎಂದು ಸಚಿವರು ತಿಳಿಸಿದರು.
ಬರಪೀಡಿತ ತಾಲೂಕುಗಳಲ್ಲಿ ಜಿಲ್ಲಾ ಆಡಳಿತದಲ್ಲಿ ಪ್ರಸ್ತುತ ಲಭ್ಯವಿರುವ ಅನುದಾನದಲ್ಲಿ ಅತ್ಯಾಧ್ಯತೆಯ ಮೇರೆಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲು ಸೂಚಿಸಲಾಗಿದೆ. ಈ ಪ್ರದೇಶಗಳಲ್ಲಿ ಗೋಶಾಲೆಗಳನ್ನು ಆರಂಭಿಸುವುದೂ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ರಾಜ್ಯ ಸರಕಾರವು 75 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಿದಲ್ಲಿ ಜಿಲ್ಲಾಡಳಿತಗಳಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲು ಸರಕಾರ ಸಿದ್ಧವಿದೆ ಎಂದು ಜಯಚಂದ್ರ ಹೇಳಿದರು.
ಬರಪೀಡಿತ ತಾಲೂಕುಗಳ ಪಟ್ಟಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ : ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ.
ರಾಮನಗರ ಜಿಲ್ಲೆ : ಚನ್ನಪಟ್ಟಣ, ಕನಕಪುರ, ಮಾಗಡಿ, ರಾಮನಗರ.
ಕೋಲಾರ : ಕೋಲಾರ, ಮಾಲೂರು, ಮುಳುಬಾಗಿಲು, ಶ್ರೀನಿವಾಸಪುರ.
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ, ಚಿಂತಾಮಣಿ, ಗುಡಿಬಂಡೆ, ಶಿಡ್ಲಘಟ್ಟ.
ತುಮಕೂರು : ಸಿ.ಎನ್. ಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತಿಪಟೂರು, ತುಮಕೂರು, ತುರುವೇಕೆರೆ.
ಚಿತ್ರದುರ್ಗ: ಹೊಸದುರ್ಗ.
ದಾವಣಗೆರೆ : ಹರಪನಹಳ್ಳಿ, ಜಗಳೂರು.
ಮಂಡ್ಯ : ಮದ್ದೂರು, ಮಂಡ್ಯ, ನಾಗಮಂಗಲ.
ಬಳ್ಳಾರಿ : ಸಂಡೂರು.
ಹಾವೇರಿ : ಬ್ಯಾಡಗಿ, ಹಾವೇರಿ, ಹಾನಗಲ್.
ಧಾರವಾಡ : ಶಿಗ್ಗಾಂವ್, ಧಾರವಾಡ.
ಶಿವಮೊಗ್ಗ : ಶಿಕಾರಿಪುರ, ಶಿವಮೊಗ್ಗ, ಸೊರಬ, ಆಲೂರು.
ಹಾಸನ : ಚನ್ನರಾಯಪಟ್ಟಣ, ಹೊಳೇನರಸೀಪುರ.







