ದೇಶವನ್ನು ಮನುವಾದದತ್ತ ಕೊಂಡೊಯ್ಯುವ ಷಡ್ಯಂತ್ರ: ಲತೀಫ್

ಉಡುಪಿ, ಅ.5: ಜಾತ್ಯತೀತ ದೇಶವಾಗಿರುವ ಭಾರತವನ್ನು ಮನುವಾದ ಹಾಗೂ ವರ್ಣಾಶ್ರಮದತ್ತ ಕೊಂಡೊಯ್ಯುವ ಷಡ್ಯಂತ್ರ ನಡೆಯುತ್ತಿದ್ದು, ಇದನ್ನು ತಡೆಯುವ ಕಾರ್ಯ ಮಾಡಬೇಕಾಗಿದೆ ಎಂದು ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಹೇಳಿದ್ದಾರೆ.
ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಜಾಗೃತಿ ಅಭಿಯಾನ ‘ಜಾತ್ಯತೀತ ಇಂಡಿಯಾ ಸಮಾವೇಶ’ದ ಪ್ರಯುಕ್ತ ಉಡುಪಿ ಜಿಲ್ಲಾ ಘಟಕದ ವತಿಯಿಂದ ಬುಧವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಆಯೋಜಿಸಲಾದ ಸಾರ್ನಜನಿಕ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಭಾರತವು ಒಂದು ವರ್ಗ, ಧರ್ಮ, ಪಂಗಡ, ಸಂಘಟನೆಯ ದೇಶವಲ್ಲ. ಎಲ್ಲರ ಧರ್ಮದವರು ಹೋರಾಡಿ ಗಳಿಸಿದ ಈ ದೇಶದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಜಾತ್ಯತೀತತೆ ಈ ದೇಶದ ಜೀವಾಳ ಎಂದ ಅವರು, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಇಡೀ ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಶೇ.19ರಷ್ಟು ಹೆಚ್ಚಾಗಿದೆ. ಕರ್ನಾಟಕದಲ್ಲಿ ಸುಮಾರು 2000 ಪ್ರಕರಣಗಳು ದಾಖಲಾಗಿವೆ ಎಂದು ದೂರಿದರು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ, ರಾಜ್ಯ ಸಮಿತಿ ಸದಸ್ಯ ಅತಾವುಲ್ಲಾ ಜೋಕಟ್ಟೆ, ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ, ಉಡುಪಿ ವಿಧಾನಸಭಾ ಕ್ಷೇತ್ರದ ಮುಖಂಡ ನಝೀರ್ ಉಡುಪಿ ಉಪಸ್ಥಿತ ರಿದ್ದರು. ಜಿಲ್ಲಾ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮಲ್ಪೆ ಸ್ವಾಗತಿಸಿದರು. ರಹೀಂ ಆದಿಉಡುಪಿ ಕಾರ್ಯಕ್ರಮ ನಿರೂಪಿಸಿದರು.







