ಗೋಕರ್ಣ ದೇವಸ್ಥಾನ ಸರಕಾರದ ಸುಪರ್ದಿಗೆ ಆಗ್ರಹಿಸಿ ಮನವಿ
ಮನವಿ
.jpg)
ಸಾಗರ, ಅ.5: ಗೋಕರ್ಣ ದೇವಸ್ಥಾನವನ್ನು ಸರಕಾರದ ವಶಕ್ಕೆ ಪಡೆಯಬೇಕು ಹಾಗೂ ಅ.8ರಂದು ಹೊಸನಗರ ಬಂದ್‌ಗೆ ನೀಡಿರುವ ಕರೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ಬಂದ್ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಒತ್ತಾಯಿಸಿ ಬುಧವಾರ ಮಲೆನಾಡು ಭೂರಹಿತರ ಹೋರಾಟ ವೇದಿಕೆ, ದಲಿತ ಸಂಘರ್ಷ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿ ಪೀಠಾಧಿಪತಿಯಾದ ನಂತರ ಮಠದಲ್ಲಿ ಸಾಲುಸಾಲು ಅತ್ಯಾಚಾರ, ಅನಾಚಾರ, ಭೂ ಒತ್ತುವರಿ, ಹಣ ದುರುಪಯೋಗ, ಮಠದ ವಿದ್ಯಾರ್ಥಿನಿ ನಿಲಯದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದಂತಹ ಘಟನೆಗಳು ನಡೆಯುತ್ತಿದೆ ಎಂದು ದೂರಿದರು. 2008ರಲ್ಲಿ ಗೋಕರ್ಣ ದೇವಸ್ಥಾನವನ್ನು ಅಂದಿನ ಸರಕಾರದ ಮೇಲೆ ಒತ್ತಡ ಹೇರಿ, ರಾಘವೇಶ್ವರ ಸ್ವಾಮಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ರಾಮಚಂದ್ರಾಪುರ ಮಠದ ಕೈಗೆ ಗೋಕರ್ಣ ದೇವಸ್ಥಾನ ಹೋದ ಮೇಲೆ ಲಕ್ಷಾಂತರ ಭಕ್ತರಿಂದ ಬರುವ ಕೋಟ್ಯಂತರ ರೂ. ಆದಾಯವನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ದೇವಸ್ಥಾನದಲ್ಲಿ ನಡೆಯುವ ಪ್ರತಿಯೊಂದು ಪೂಜೆಗಳಿಗೂ ದರ ನಿಗದಿ ಮಾಡಿ, ಗರ್ಭಗುಡಿಗೆ ಹೋಗಿ ದೇವರ ಮೂರ್ತಿಯನ್ನು ಮುಟ್ಟಿ ನಮಸ್ಕರಿಸಲು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಹೇರಲಾಗುತ್ತಿದೆ ಎಂದು ದೂರಿದರು. ಗೋಕರ್ಣ ದೇವಸ್ಥಾನವನ್ನು ಸರಕಾರ ವಾಪಸ್ ಪಡೆಯುವ ಬಗ್ಗೆ ಯೋಚಿಸುತ್ತಿರುವ ಬಗ್ಗೆ ಚಿಂತನೆ ನಡೆಸಿರುವ ವಿಷಯ ತಿಳಿದು ರಾಘವೇಶ್ವರರು ದೇವಸ್ಥಾನ ಪುನಃ ಹೋದರೆ ಹಣ ದುರುಪಯೋಗವಾಗುತ್ತದೆ, ಲೂಟಿ ಹೊಡೆಯುವವರು ಹೆಚ್ಚಾಗುತ್ತಾರೆ ಎಂದು ಹೇಳುವ ಮೂಲಕ ಸರಕಾರಕ್ಕೆ ಅವಮಾನವಾಗುವಂತೆ ಮಾತನಾಡಿರುವ ಕ್ರಮ ಖಂಡನೀಯ ಎಂದರು. ಹೊಸನಗರ ರಾಮಚಂದ್ರಾಪುರ ಮಠದ ಸುತ್ತಮುತ್ತಲಿನ ಪರಿಸರ ಹಾಳು ಮಾಡಿ ಸರಕಾರದಿಂದ ದಂಡ ಹಾಕಿಸಿಕೊಂಡಿರುವ ರಾಘವೇಶ್ವರರು ನ್ಯಾಯಾಲಯಕ್ಕೆ ಅಲೆದಾಟ ನಡೆಸುತ್ತಿದ್ದಾರೆ. ಈ ನಡುವೆ ಸರಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟಲು ಅ.8ರಂದು ಹೊಸನಗರ ಬಂದ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಅನೇಕ ಬಂದ್‌ನಿಂದ ತಾಲೂಕಿನ ಜನರು ರೋಸಿ ಹೋಗಿದ್ದಾರೆ. ಅ. 8ಕ್ಕೆ ಕರೆ ನೀಡಿರುವ ಬಂದ್‌ಗೆ ಸರಕಾರ ಅವಕಾಶ ನೀಡಬಾರದು. ಗೋಕರ್ಣ ದೇವಸ್ಥಾನವನ್ನು ಸರಕಾರ ತಕ್ಷಣ ತನ್ನ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಮಲೆನಾಡು ಭೂರಹಿತರ ಹೋರಾಟ ಸಮಿತಿಯ ಕಬಸೆ ಅಶೋಕಮೂರ್ತಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ನಾಗರಾಜ್, ನಾಗೇಂದ್ರಪ್ಪ ದೊಡ್ಮನಿ, ಗುತ್ಯಪ್ಪ ಮಾವಿನಸರ, ಬಂಗಾರಪ್ಪ ಶುಂಠಿಕೊಪ್ಪ, ಕೃಷ್ಣಮೂರ್ತಿ, ವೈ.ಎನ್.ಹುಬ್ಬಳಿ, ಮಂಜಪ್ಪ ಗಾಂಧಿನಗರ, ಮಲ್ಲೇಶಗೌಡ ಇನ್ನಿತರರು ಹಾಜರಿದ್ದರು.





