ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತ್ಯು
ಶಿವಮೊಗ್ಗ, ಅ. 5: ಜ್ವರದ ಕಾರಣದಿಂದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಬಾಲಕ ಹಾಗೂ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿರುವ ಘಟನೆ ಶಿವಮೊಗ್ಗ ನಗರದಲ್ಲಿ ವರದಿಯಾಗಿದೆ. ಹೊಸಮನೆ ನಗರದ ನಿವಾಸಿ ಬಾಲಕಿ ಗೀತಾಂಜಲಿ (11) ಹಾಗೂ ಬಡಾವಣೆಯೊಂದರ ನಿವಾಸಿ ತರುಣ್ (9) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಇದರಲ್ಲಿ ಗೀತಾಂಜಲಿಯ ಸಾವಿಗೆ ಡೆಂಗ್ ಜ್ವರ ಕಾರಣವಲ್ಲ ಎಂಬ ಅಂಶ ರಕ್ತ ಪರೀಕ್ಷೆಯಿಂದ ದೃಢಪಟ್ಟಿದೆ. ಉಳಿದಂತೆ ತರುಣ್ ಸಾವಿಗೆ ಇನ್ನಷ್ಟೇ ಸ್ಪಷ್ಟ ಕಾರಣ ತಿಳಿದುಬರಬೇಕಾಗಿದೆ. ಒಂದೇ ದಿನ ಇಬ್ಬರು ಅಸುನೀಗಿರುವುದು ನಾಗರಿಕರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಬುಧವಾರ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ. ರಾಜೇಶ್ ಸುರಗೀಹಳ್ಳಿಯವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ ಬಾಲಕ ಹಾಗೂ ಬಾಲಕಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಗೀತಾಂಜಲಿ ಸಾವಿಗೆ ಡೆಂಗ್ ಕಾರಣವಲ್ಲ. ತರುಣ್ ಪ್ರಕರಣದಲ್ಲಿ ರಕ್ತದ ಮಾದರಿ ಸಂಗ್ರಹಿಸಿ ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಪರೀಕ್ಷಾ ವರದಿ ಕೈ ಸೇರಿದ ನಂತರ ಸಾವಿಗೆ ಸ್ಪಷ್ಟ ಕಾರಣ ತಿಳಿದುಬರಬೇಕಾಗಿದೆ ಎಂದು ತಿಳಿಸಿದ್ದಾರೆ. ಗೀತಾಂಜಲಿ ಅ.3ರಂದು ಆಸ್ಪತ್ರೆಗೆ ದಾಖಲಾಗಿದ್ದು, ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾಳೆ. ತರುಣ್ ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದು, ಸಂಜೆ ವೇಳೆೆ ಮೃತಪಟ್ಟಿದ್ದಾನೆ. ಆಸ್ಪತ್ರೆಗೆ ದಾಖಲಾಗುವ ಮುನ್ನ ಇವರಿಬ್ಬರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ತರುಣ್ ಜ್ವರದಿಂದ ಬಳಲುತ್ತಿದ್ದುದರ ಜೊತೆಗೆ ಹೊಟ್ಟೆನೋವು, ವಾಂತಿ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಡಾ. ರಾಜೇಶ್ ಸುರಗೀಹಳ್ಳಿ ಹೇಳಿದ್ದಾರೆ. ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳಲ್ಲಿ ದಿನದಿಂದ ದಿನಕ್ಕೆ ಜ್ವರದ ಬಾಧೆಗೆ ತುತ್ತಾಗಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ನಾಗರಿಕರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಇದು ನಿಜಕ್ಕೂ ಆತಂಕಕಾರಿಯಾದ ವಿಷಯವಾಗಿದೆ. ಆದರೆ ಜಿಲ್ಲಾಡಳಿತವಾಗಲಿ, ಸ್ಥಳೀಯಾಡಳಿತಗಳಾಗಲಿ ವಿಷಯದ ಗಂಭೀರತೆ ಅರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಸದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸೊಳ್ಳೆಗಳ ನಿರ್ಮೂಲನೆ, ಸಮರ್ಪಕ ಘನತ್ಯಾಜ್ಯ ವಿಲೇವಾರಿ, ರಾಜಕಾಲುವೆ-ಚರಂಡಿ ಸ್ವಚ್ಛತೆ, ಫಾಗಿಂಗ್, ಕ್ರಿಮಿನಾಶಕ ಸಿಂಪಡಣೆಗೆ ಒತ್ತು ನೀಡಬೇಕಾಗಿದೆ. ಡೆಂಗ್ ಜ್ವರ ಸೇರಿದಂತೆ ಆರೋಗ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳನ್ನು ಸ್ಥಳೀಯಾಡಳಿತಗಳು ನಡೆಸಬೇಕಾಗಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.





