ಅಗ್ರಿಗೋಲ್ಡ್ ಹಗರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ

ಉಡುಪಿ, ಅ.5: ಅಗ್ರಿಗೋಲ್ಡ್ ಅಂತಾರಾಜ್ಯ ಬಹುಕೋಟಿ ಹಗರಣದ ನಾಲ್ವರು ಆರೋಪಿಗಳನ್ನು ಸಿಐಡಿ ಪೊಲೀಸರು ಇಂದು ಬೆಳಗ್ಗೆ 8ಗಂಟೆಗೆ ಉಡುಪಿ ನ್ಯಾಯಾಧೀಶರ ಗೃಹ ಕಚೇರಿ ಮುಂದೆ ಹಾಜರುಪಡಿಸಿದ್ದು, ಈ ಎಲ್ಲ ಆರೋಪಿಗಳನ್ನು ಅ.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅ.1ರಿಂದ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಅಗ್ರಿ ಗೋಲ್ಡ್ ಕಂಪೆನಿಯ ಚೇರ್‌ಮ್ಯಾನ್ ಅವ್ವಾ ವೆಂಕಟರಾಮರಾವ್, ಆಡಳಿತ ನಿರ್ದೇಶಕರಾದ ಅವ್ವಾ ವೆಂಕಟ ಶೇಷು ನಾರಾಯಣ ರಾವ್, ಕಾಮಿರೆಡ್ಡಿ ರಾಮಚಂದ್ರರಾವ್, ನಿರ್ದೇಶಕ ಇಮ್ಮಡಿ ಸದಾಶಿವ ವರಪ್ರಸಾದ್ ರಾವ್ ಅವರನ್ನು ಪ್ರಕರಣದ ತನಿಖಾಧಿಕಾರಿ ನಂಜುಂಡೇಗೌಡ ನೇತೃತ್ವದಲ್ಲಿ ನ್ಯಾಯಾ ಧೀಶರ ಮನೆ ಕಚೇರಿ ಮುಂದೆ ಹಾಜರುಪಡಿಸಲಾಯಿತು. ಇವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಕೇಳಿ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಶಿವರಾಮ್ ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.
ಆರೋಪಿಗಳನ್ನು ಬಾಡಿ ವಾರೆಂಟ್ ಆದೇಶದಂತೆ ಆಂಧ್ರ ಪ್ರದೇಶದ ವೆಸ್ಟ್ ಗೋದಾವರಿ ಜಿಲ್ಲೆಯ ಏಲೂರು ಜಿಲ್ಲಾ ಕಾರಾ ಗೃಹದಿಂದ ಕರೆ ತಂದಿರುವುದರಿಂದ ಮತ್ತೆ ಅವರನ್ನು ಅಲ್ಲಿಗೆ ಬಿಗಿ ಭದ್ರತೆ ಯಲ್ಲಿ ಕರೆದೊಯ್ಯಲಾಯಿತು. ಮುಂದೆ ಅಗತ್ಯ ಬಿದ್ದರೆ ಮಾತ್ರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬಹುದಾಗಿದೆ.
ಏಜೆಂಟರ ಆಕ್ರೋಶ:
ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂಬ ಮಾಹಿತಿ ತಿಳಿದು ಆಂಧ್ರಪ್ರದೇಶ, ಮೈಸೂರು, ಬೆಂಗಳೂರು, ಮಂಡ್ಯ, ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ನೂರಾರು ಏಜೆಂಟರುಗಳು ಉಡುಪಿ ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದರು. ಆದರೆ ಸಿಐಡಿ ಪೊಲೀಸರು ಜನ ಸೇರಿ ತೊಂದರೆಯಾಗಬಹುದೆಂಬ ಕಾರಣಕ್ಕೆ ಆರೋಪಿಗಳನ್ನು ಬೆಳಗ್ಗೆಯೇ ನ್ಯಾಯಾಧೀಶರ ಮನೆ ಮುಂದೆ ಹಾಜರು ಪಡಿಸಿದ್ದರು. ಇದನ್ನು ತಿಳಿಯದ ಏಜೆಂಟರು ಬೆಳಗ್ಗೆಯಿಂದಲೇ ಕೋರ್ಟ್ ಆವರಣದಲ್ಲಿ ಜಮಾಯಿಸಿ ಆರೋಪಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತಿದ್ದರು.
ಆರೋಪಿಗಳ ಗಮನ ಸೆಳೆಯುವುದಕ್ಕಾಗಿ ಇಷ್ಟು ಸಂಖ್ಯೆಯಲ್ಲಿ ನಾವು ಇಲ್ಲಿಗೆ ಬಂದಿದ್ದೇವೆ ಎಂದು ಮೈಸೂರಿನ ಮಹಾದೇವಮ್ಮ ತಿಳಿಸಿದರು. ಅಗ್ರಿಗೋಲ್ಡ್‌ನ ಆಡಳಿತ ಮಂಡಳಿಯ ವಿರುದ್ಧ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಪ್ರಕರಣ ದಾಖಲಿಸಿದ್ದ ಆಂಧ್ರಪ್ರದೇಶದ ರಮೇಶ್ ಬಾಬು ಕೂಡ ಉಡುಪಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಆವರಣ ದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.







