ಬರಪೀಡಿತ ಜಿಲ್ಲೆ ಘೋಷಿಸಲು ಒತ್ತಾಯ
ರೈತ ಸಂಘದಿಂದ ಧರಣಿ

ಚಿಕ್ಕಮಗಳೂರು, ಅ.5: ರಾಜ್ಯದಲ್ಲಿ ಸತತ ಬರಗಾಲದಿಂದ ಕೃಷಿ ಚಟುವಟಿಕೆಗಳು ನಡೆದಿಲ್ಲ. ಅಲ್ಪಸ್ವಲ್ಪ ಬಿತ್ತನೆ ನಡೆದಿದ್ದರೂ ಮಳೆ ಇಲ್ಲದೆ ನಷ್ಟವಾಗಿದೆ. ಚಿಕ್ಕಮಗಳೂರು ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಚಿಕ್ಕಮಗಳೂರು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ರೈತರ ಎಲ್ಲ ಬೆಳೆ ಸಾಲಗಳನ್ನು ಪೂರ್ಣ ಮನ್ನಾ ಮಾಡಬೇಕು. ತರಕಾರಿ, ಕಾಫಿ, ಮೆಣಸು ಬೆಳೆಗಳು ಒಣಗಿವೆ. ಜಾನುವಾರುಗಳಿಗೆ ಮೇವಿಲ್ಲ. ವಾಣಿಜ್ಯ ಬ್ಯಾಂಕಿನಲ್ಲಿ ಪಡೆದಿರುವ ಸಾಲವನ್ನು ಮನ್ನಾ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು. ಬರದಿಂದ ಆದ ನಷ್ಟಕ್ಕೆ ಉಂಟಾಗುವ ಬೆಳೆಗಳಿಗೆ ಒಂದು ಎಕರೆಗೆ 40 ಸಾವಿರ ರೂ. ಪರಿಹಾರ ನೀಡಬೇಕು. ಚಿಕ್ಕಮಗಳೂರು ತಾಲೂಕಿನ ಹೊನ್ನಮ್ಮನ ಹಳ್ಳದಿಂದ ದಾಸರಹಳ್ಳಿ ಕೆರೆಗೆ ನೀರು ತುಂಬಿಸಿ ಆ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.
ಯಗಚಿ ಜಲಾಶಯದಿಂದ ಚಿಕ್ಕಮಗಳೂರು ಹೌಸಿಂಗ್ ಬೋರ್ಡ್‌ಗೆ ಕುಡಿಯುವ ನೀರು ಸರಬರಾಜಾಗಿದ್ದು, ಯೋಜನೆಯನ್ನು ಮುಂದುವರಿಸಿ ಲಕ್ಯಾ ಹೋಬಳಿಯ ಹಿರೇಗೌಜ, ಲಕ್ಕುಮನಹಳ್ಳಿ ಹಾಗೂ ಬಿಳೇಕಲ್ಲಹಳ್ಳಿ ಗ್ರಾಪಂ ವ್ಯಾಪ್ತಿಗೂ ನೀರು ಒದಗಿಸಬೇಕು. ಮತ್ತಾವರ ಗ್ರಾಮದ ಸ.ನಂ. 386ರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು, ಸರಕಾರದ ಗಮನಕ್ಕೆ ತಂದರೂ ಅಕ್ರಮ ನಿಂತಿಲ್ಲ. ತಕ್ಷಣ ಈ ಬಗ್ಗೆ ಗಮನಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಿಲ್ಲೆಯ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು. ಕಾಫಿ, ಮೆಣಸು ಬರಗಾಲದಿಂದ ನಷ್ಟಕ್ಕೀಡಾಗಿದ್ದು, ಸೂಕ್ತ ಪರಿಹಾರ ನೀಡಬೇಕು. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿದ್ದು, ರೋಗಿಗಳು ದೂರದ ಹಾಸನ, ಮೈಸೂರು, ಮಂಗಳೂರು, ಶಿವಮೊಗ್ಗ ಜಿಲ್ಲೆಗೆ ಅಲೆಯುವಂತಾಗಿದೆ. ಆಸ್ಪತ್ರೆಗೆ ಕೂಡಲೇ ಅಗತ್ಯ ವೈದ್ಯರು, ಸಿಬ್ಬಂದಿಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮೂಡಿಗೆರೆ ತಾಲೂಕಿನ ದಾರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಹಾಜರಾಗದೇ ರೋಗಿಗಳಿಗೆ ತೊಂದರೆಯಾಗಿದೆ. ಕೂಲಿ ಕಾರ್ಮಿಕರಿಗೆ ನಿವೇಶನ ಒದಗಿಸಬೇಕು. ಜಾನುವಾರುಗಳ ರಕ್ಷಣೆಗೆ ಮೇವು ಬ್ಯಾಂಕ್ ಸ್ಥಾಪನೆ ಮಾಡಿ ಸಮರ್ಪಕ ಮೇವು ಒದಗಿಸಬೇಕು. ಪಶ್ಚಿಮ ಘಟ್ಟದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದ್ದು, ಈ ಕೃತ್ಯವನ್ನು ತಡೆಗಟ್ಟಲು ಅಗತ್ಯ ಕ್ರಮ ಜರಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಎನ್.ಜಿ. ಉದ್ದೇಗೌಡ, ಗೌರವಾಧ್ಯಕ್ಷ ಎಸ್.ಎಂ. ನಿಂಗೇಗೌಡ, ಗ್ರಾಪಂ ಅಧ್ಯಕ್ಷ ಮಾಸ್ತೇಗೌಡ, ಜಿಲ್ಲಾ ಕಾರ್ಯದರ್ಶಿ ಕೆ.ಜೆ. ರಂಗನಾಥ್, ತಾಲೂಕು ಕಾರ್ಯದರ್ಶಿ ಶಾಂತೇಗೌಡ, ಹೋಬಳಿ ಅಧ್ಯಕ್ಷ ಪೂರ್ಣೇಶ್, ಮಹಿಳಾ ಅಧ್ಯಕ್ಷೆ ಕೆಂಪಮ್ಮ, ಚಂದ್ರಕಲಾ, ರುಕ್ಮಿಣಿಯಮ್ಮ, ಪುಷ್ಪಾ, ಗಣೇಶ್ ರಾಜು ಮತ್ತಿತರರಿದ್ದರು.







