ಡಿವೈಎಸ್ಪಿ ಕಲ್ಲಪ್ಪಹಂಡಿಬಾಗ್
ಸಿಐಡಿ ಚಾರ್ಜ್‌ಶೀಟ್ ಸಲ್ಲಿಕೆ

ಚಿಕ್ಕಮಗಳೂರು, ಅ.5: ಹಣಕ್ಕಾಗಿ ತೇಜಸ್ ಗೌಡ ಅಪಹರಣ ಪ್ರಕರಣದಲ್ಲಿ ಡಿವೈಎಸ್ಪಿ ಕಲ್ಲಪ್ಪಹಂಡಿಬಾಗ್ ನಿರ್ದೋಷಿ ಎಂದು ಸಿಐಡಿ ಅಧಿಕಾರಿಗಳು ಚಿಕ್ಕಮಗಳೂರು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ದೃಢಪಡಿಸಿದ್ದಾರೆ ಎಂದು ಪ್ರವೀಣ್ ಖಾಂಡ್ಯ ಪರ ವಕೀಲ ರವೀಂದ್ರ ಮಾಧ್ಯಮಗಳ ಮುಂದೆ ಬುಧವಾರ ಹೇಳಿದ್ದಾರೆ.
ಹಣಕ್ಕಾಗಿ ತೇಜಸ್‌ಗೌಡ ಅಪಹರಣ ಪ್ರಕರಣದಲ್ಲಿ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪಹಂಡಿಬಾಗ್ ಯಾವುದೇ ತಪ್ಪುಮಾಡಿಲ್ಲ ಎಂದು ಸಿಐಡಿ ವರದಿಯಲ್ಲಿ ತಿಳಿಸಿದೆ. ಪ್ರಕರಣ ಸಂಬಂಧ ಕಳೆದ ಮೂರು ತಿಂಗಳಿನಿಂದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳ ತಂಡ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಈ ಅಂಶ ದೃಢಪಡಿಸಲಾಗಿದೆ ಎಂದು ಅವರು ಮಾಧ್ಯಮಗಳ ಮುಂದೆ ತಿಳಿಸಿದರು.
ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಅವರನ್ನು ಆರೋಪಿ ಸ್ಥಾನದಿಂದ ಕೈಬಿಡಲಾಗಿದೆ. ತೇಜಸ್ ಗೌಡ ಅಪಹರಣ ಪ್ರಕರಣದ ಬಂಧಿತ ಆರೋಪಿಗಳಾದ ನಟರಾಜ್, ಅಭಿಷೇಕ್, ನವೀನ್ ಶೆಟ್ಟಿ, ಪ್ರದೀಪ್, ಜಾಯ್ ಮಿಲ್ಟನ್, ಯಶಸ್ ಗೌಡ, ಜೀವನ್ ಕುಮಾರ್, ವಿಜಯ ಕುಮಾರ್, ಅಶ್ವಿನ್ ಶೆಟ್ಟಿ ವಿರುದ್ಧ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಪ್ರವೀಣ್ ಖಾಂಡ್ಯನ ಹೆಸರನ್ನು ಆರೋಪ ಪಟ್ಟಿಯಲ್ಲಿ ಎಲ್ಲೂ ಪ್ರಸ್ತಾಪಿಸಿಲ್ಲ. ಏಕೆಂದರೆ ಆತನ ಬಂಧನದ ಬಳಿಕವಷ್ಟೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಬೇಕಾಗುತ್ತದೆ ಎನ್ನುವುದು ಕಾನೂನು ತಜ್ಞರ ಅಭಿಪ್ರಾಯ. ಪ್ರಕರಣ ಸಂಬಂಧ 2016ರ ಜುಲೈ 4ರಂದು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜು.5ರಂದು ಡಿವೈಎಸ್ಪಿ ಕಲ್ಲಪ್ಪಹಂಡಿಬಾಗ್ ಆತ್ಮಹತ್ಯೆಗೆ ಶರಣಾಗಿದ್ದರು.







