ಸಮಯ ಪ್ರಜ್ಞೆ ಇಲ್ಲದ ಅಧಿಕಾರಿಗಳ ವಿರುದ್ಧ ಲೋಬೊ ಆಕ್ರೋಶ
ಸಭೆ ಬಹಿಷ್ಕರಿಸಿ ಹೊರ ನಡೆದ ಸಮಿತಿ ಸದಸ್ಯರು
ಕಾರವಾರ, ಅ.5: ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ ಸಭೆಗೆ ಅಧಿಕಾರಿಗಳು ತಡವಾಗಿ ಬಂದ ಹಿನ್ನೆಲೆ ಆಕ್ರೋಶಗೊಂಡ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಜೆ. ಆರ್. ಲೋಬೊ ಹಾಗೂ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದ ಘಟನೆ ನಗರದ ಜಿಲ್ಲಾ ಪಂಚಾಯತ್ ಸಭಾಭನವದಲ್ಲಿ ಬುಧವಾರ ನಡೆದಿದೆ.
ಈ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಅವರು ವಿಧಾನ ಮಂಡಲದ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸದಸ್ಯರಲ್ಲಿ ಕ್ಷಮೆಯಾಚಿಸಿದರೂ ಒಪ್ಪದೇ ಸಭೆಯನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಿದರು.
ಬೆಳಗ್ಗೆ 10:45ಕ್ಕೆ ಅಧಿಕಾರಿಗಳು ಜಿಪಂ ಸಭಾಂಗಣಕ್ಕೆ ಬರುತ್ತಿದ್ದಂತೆ ವೇದಿಕೆಯಲ್ಲಿ ಕುಳಿತಿದ್ದ ಸಮಿತಿಯ ಅಧ್ಯಕ್ಷ ಜೆ. ಆರ್. ಲೋಬೊ ಆಕ್ರೋಶ ಗೊಂಡು ಅಧಿಕಾರಿಗಳಿಗೆ ಯಾರ್ರೀ ನೀವು.....ಇಲಾಖೆ ಯಾವುದು ನಿಮ್ಮದು.. ಸಮಯ ಪ್ರಜ್ಞೆ ಇದೆಯೇ ನಿಮಗೆ? ಎಲ್ಲಿಂದ ಬರುತ್ತಿದ್ದೀರಿ? ಎನ್ನುವ ಪ್ರಶ್ನೆಗಳ ಸುರಿಮಳೆಯೇ ಸುರಿಸಿದರು. ಇದರಿಂದ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು.
ಅಧಿಕಾರಿಗಳು ಅಧ್ಯಕ್ಷರ ಪ್ರಶ್ನೆಗೆ ಉತ್ತರಿಸಲಾಗದೆ ಸುಮ್ಮನಾದರು. ಬಳಿಕ ಅಧ್ಯಕ್ಷ ಲೋಬೊ ಅವರು ಉಳಿದ ಸದಸ್ಯರ ಜೊತೆಗೆ ಚರ್ಚೆ ನಡೆಸಿ ಬಳಿಕ ಹೊರ ನಡೆದರು. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ ಈಗಾಗಲೇ ಬೆಳಗಾವಿ, ಬಿಜಾಪುರ, ಬೀದರ್, ಚಿಕ್ಕಮಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ ಸಭೆ ನಡೆಸಿದೆ. ಎಲ್ಲಿಯೂ ಅಧಿಕಾರಿಗಳಿಂದ ಈ ರೀತಿಯ ನಿರ್ಲಕ್ಷ್ಯ ಧೋರಣೆ ಕಂಡುಬಂದಿಲ್ಲ. ಸಮಿತಿಯ ಘನತೆಗೆ ಕುಂದುಂಟಾಗುವಂತೆ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಗೊಳಿಸಲಾಗುವುದು ಎಂದು ಸಮಿತಿ ಸದಸ್ಯರು ಹೇಳಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ಜೆ. ಆರ್. ಲೋಬೊ, ರದ್ದಾಗಿರುವ ಸಭೆಗೆ ಬಂದ ಸರ್ವ ಸದಸ್ಯರ ಪ್ರಯಾಣದ ವೆಚ್ಚ ಹಾಗೂ ಇತರ ಭತ್ತೆ ನೀಡಬೇಕೋ ಬೇಡವೋ ಎನ್ನುವುದು ಸರಕಾರಕ್ಕೆ ಬಿಟ್ಟ ವಿಚಾರ. 10 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಸಭೆಯಲ್ಲಿ ಎಲ್ಲೂ ಅಧಿಕಾರಿ ವರ್ಗ ಈ ರೀತಿ ನಡೆದುಕೊಂಡಿಲ್ಲ. ಸಭೆ ನಡೆದ ಬಳಿಕ ಸರಕಾರಕ್ಕೆ ವರದಿ ಸಲ್ಲಿಸುವುದು ನಮ್ಮ ಕರ್ತವ್ಯ. ಜಿಲ್ಲೆಯಲ್ಲಿ ಕೆಲವು ದಿನದ ಬಳಿಕ ಸಭೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಸತೀಶ ಸೈಲ್, ಮಂಕಾಳು ವೈದ್ಯ, ಸತೀಶ ಜಾರಕಿಹೊಳಿ, ಅಬ್ದುಲ್ ಜಬ್ಬಾರ್, ಎಂ. ಡಿ. ಲಕ್ಷ್ಮೀ ನಾರಾಯಣ, ಎಸ್. ಅಂಗಾರ, ಗೋಪಾಲ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.







