ಸೀಮಿತ ದಾಳಿಯ ಮಾಹಿತಿ ಬಹಿರಂಗಪಡಿಸಬಾರದು: ಸೇನೆ-ಗುಪ್ತಚರ್ಯ ಪರಿಣತರ ಎಚ್ಚರಿಕೆ

ಹೊಸದಿಲ್ಲಿ, ಅ.5: ಪಾಕಿಸ್ತಾನವು ಭಾರತದ ಕಾರ್ಯಾಚರಣೆ ತಂತ್ರದ ಕುರಿತಾದ ಮಾಹಿತಿಗಾಗಿ ಹೊಂಚು ಹಾಕುತ್ತಿರುವುದರಿಂದ ಭಾರತವು ಸೀಮಿತ ದಾಳಿಯ ಕುರಿತಾದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಬಾರದೆಂದು ಜನರಲ್ ಶಂಕರ್ ರಾಯ್ ಚೌಧುರಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಇದು ಮುಂದುವರಿಯಲಿರುವ ಕಾರ್ಯಾಚರಣೆಯಾಗಿದೆ. ಐಎಸ್‌ಐ ಹಾಗೂ ಪಾಕಿಸ್ತಾನಿ ಸೇನೆ, ಮುಖ್ಯವಾಗಿ ಭಾರತೀಯ ಮಾಧ್ಯಮಗಳಿಂದ ಏನೆಲ್ಲ ಹೆಕ್ಕಿಕೊಳ್ಳಬಹುದೆಂಬುದನ್ನು ಕಾತರದಿಂದ ಎದುರು ನೋಡುತ್ತಿವೆ. ಏಕೆಂದರೆ ಶೇ.80ರಷ್ಟು ಗುಪ್ತ ಮಾಹಿತಿ ಮುಕ್ತ ಮೂಲಗಳಿಂದ ಬರುತ್ತದೆಂದು 1994ರಿಂದ 97ರ ವರೆಗೆ ಭೂಸೇನೆಯ ದಂಡನಾಯಕರಾಗಿದ್ದ ಚೌಧುರಿ ಹೇಳಿದ್ದಾರೆ.
ಅವರ ಮಾತನ್ನು ಪ್ರತಿಧ್ವನಿಸಿರುವ ಇನ್ನೋರ್ವ ಮಾಜಿ ದಂಡನಾಯಕ ಜೆ.ಜೆ. ಸಿಂಗ್, ಸೇನೆ ಕೈಗೊಂಡ ಕಾರ್ಯಾಚರಣೆಯ ವಾಸ್ತವ ಹಾಗೂ ಅದಕ್ಕೆ ಸಾಕ್ಷ ಕೇಳುವ ಹಕ್ಕು ಯಾರಿಗಾದರೂ ಇದೆಯೆಂದು ತನಗನಿಸುವುದಿಲ್ಲವೆಂದು ಬುಧವಾರ ತಿಳಿಸಿದ್ದಾರೆ.
ವಿಪಕ್ಷ ಕಾಂಗ್ರೆಸ್‌ನ ನಾಯಕರು ಹಾಗೂ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಸೀಮಿತ ದಾಳಿ ನಡೆಸಿರುವುದಕ್ಕೆ ಸರಕಾರ ಸಾಕ್ಷವನ್ನು ಬಹಿರಂಗಪಡಿಸಬೇಕು ಎಂದಿದ್ದರು.
ಡ್ರೋನ್‌ಗಳ ಮೂಲಕ ತೆಗೆಯಲಾಗಿರುವ ದಾಳಿಯ ಭಾಗಶಃ ಚಿತ್ರಗಳನ್ನು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಲಾಗಿದೆಯೆಂದು ಸೇನಾ ಮೂಲಗಳು ಖಚಿತಪಡಿಸಿವೆ.
ಇಂದು ಬೆಳಗ್ಗೆ ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆಯ ಕುರಿತಾದ ಸಂಪುಟ ಸಮಿತಿಯ ಸಭೆಯಲ್ಲಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದಲ್ಲಿ ದಾಳಿಗಳನ್ನು ನಡೆಸಲು ಗಡಿಯಾಚೆ ಸುಮಾರು 100ರಷ್ಟು ಭಯೋತ್ಪಾದಕರು ಕಾಯುತ್ತಿದ್ದಾರೆಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ.







