ಕಟ್ಟಡ ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಇಲ್ಲ: ಶಾಸಕ ಬಿ.ಬಿ. ನಿಂಗಯ್ಯ
ಭೂಮಿಪೂಜೆ

ಮೂಡಿಗೆರೆ, ಅ.5: ಕಟ್ಟಡ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿಗೆ ಈ ಮೊದಲೂ ಮಣಿದಿಲ್ಲ. ಮುಂದಿನ ದಿನಗಳಲ್ಲಿಯೂ ಮಣಿಯುವುದಿಲ್ಲ ಎಂದು ಶಾಸಕ ಬಿ.ಬಿ. ನಿಂಗಯ್ಯ ತಿಳಿಸಿದ್ದಾರೆ.
ಅವರು ಬುಧವಾರ ಬಿದರಹಳ್ಳಿಯಲ್ಲಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಹೆಚ್ಚುವರಿ ಕಟ್ಟಡ ನಿರ್ಮಾಣ ಹಾಗೂ ದುರಸ್ತಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ ವರ್ಷ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಧನ್ನಕ್ಕಿಹರ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಜಿಲ್ಲೆಗೆ 10 ಕೋಟಿ ರೂ. ಬಿಡುಗಡೆ ಮಾಡಿದ್ದರು. ಅದರಲ್ಲಿ 6 ಕೋಟಿ ರೂ. ತನ್ನ ಕ್ಷೇತ್ರಕ್ಕೆ ಮತ್ತು 4 ಕೋಟಿ ರೂ. ಗಿರಿಜನರು ಹೆಚ್ಚಾಗಿರುವ ಪ್ರದೇಶಕ್ಕೆ ಮೀಸಲಿರಿಸಲಾಗಿತ್ತು ಎಂದು ಹೇಳಿದರು. ಮೊರಾರ್ಜಿ ಶಾಲಾ ಹೆಚ್ಚುವರಿ ಕಟ್ಟಡಕ್ಕೆ 2.50 ಕೋಟಿ ರೂ., ಕೊಟ್ಟಿಗೆ ಹಾರದ ಏಕಲವ್ಯ ವಸತಿ ಶಾಲೆಗೆ 1.30 ಕೋಟಿ. ರೂ. ಸೇರಿ ಒಟ್ಟು 3.80 ಕೋಟಿ ರೂ. ಈ ಶಾಲೆಗಳ ಶಾಲೆ ಕಟ್ಟಡಕ್ಕೆ ವಿನಿಯೋಗಿಸಲಾಗುವುದು. ಗಿರಿಜನ ಯೋಜನೆಯಲ್ಲಿ ಸಮುದಾಯದ ಅಭಿವೃದ್ಧಿಗೆ ಇನ್ನು 7.50 ಕೋಟಿ ರೂ. ಮಂಜೂರುಗೊಂಡಿದೆ ಎಂದು ತಿಳಿಸಿದ ಅವರು, ಮೊರಾರ್ಜಿ ವಸತಿ ಶಾಲೆ ಹಾಗೂ ಅಗ್ನಿಶಾಮಕ ಠಾಣೆ ಮತ್ತು ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂಎಲ್‌ಸಿ ಎಂ.ಕೆ. ಪ್ರಾಣೇಶ್, ಕಟ್ಟಡವನ್ನು ಗುತ್ತಿಗೆದಾರರು ಇನ್ನೊಬ್ಬ ಉಪಗುತ್ತಿಗೆದಾರರಿಗೆ ವಹಿಸಬಾರದು. ಅವಧಿಯೊಳಗೆ ಕಾಮಗಾರಿ ಮುಗಿಸಬೇಕು. ಅಗ್ನಿಶಾಮಕ ಠಾಣೆಯಲ್ಲಿ 27 ಜನ ಸಿಬ್ಬಂದಿ ಇರಬೇಕು. ಈಗ 15 ಮಂದಿ ಸಿಬ್ಬಂದಿ ಇದ್ದಾರೆ. ಇನ್ನು 12 ಸಿಬ್ಬಂದಿಯ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಸಧ್ಯದಲ್ಲೇ ತುಂಬಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಬೆಟ್ಟಗೆರೆ ಗ್ರಾಪಂ ಅಧ್ಯಕ್ಷ ದಿನೇಶ್, ಜಿಪಂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಮಣ್ಣ, ಜಿಪಂ ಸದಸ್ಯೆ ಸುಧಾ ಯೋಗೇಶ್, ತಾಪಂ ಅಧ್ಯಕ್ಷ ಕೆ.ಎಲ್.ರತನ್, ಸಮಾಜ ಕಲ್ಯಾಣಾಧಿಕಾರಿ ಧನಂಜಯ, ಗುತ್ತಿಗೆದಾರ ಭದ್ರಾವತಿಯ ಅರುಣ್‌ಕುಮಾರ್, ಮುಖಂಡ ಉಪೇಂದ್ರಗೌಡ, ಮೊರಾರ್ಜಿ ಶಾಲೆಯ ಶಿಕ್ಷಕರಾದ ಚೇತನ್, ರೇಖಾ, ವರಲಕ್ಷ್ಮೀ, ಕೆ.ಸತೀಶ್, ಪ್ರದೀಪ್, ರಂಗಸ್ವಾಮಿ, ಜಿ.ಕೆ. ಸತೀಶ್, ಅನಿಲ್, ಮಂಜುನಾಥ್, ರಮೇಶ್ ಮತ್ತಿತರಿದ್ದರು.





