ಅಧಿಕಾರಿಗಳ ಅವೈಜ್ಞಾನಿಕ ಬರ ಸಮೀಕ್ಷೆಗೆ ರೈತ ಕಂಗಾಲು: ಶಾಸಕ ಮಧು ಬಂಗಾರಪ್ಪ
ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ಶಂಕುಸ್ಥಾಪನೆ

ಸೊರಬ, ಅ.5: ಅಧಿಕಾರಿಗಳು ತಾಲೂಕಿನಲ್ಲಿ ಬೇಜವಾಬ್ದಾರಿಯಿಂದ ಅವೈಜ್ಞಾನಿಕ ಬರ ಸಮೀಕ್ಷೆ ಮಾಡಿದ ಪರಿಣಾಮ ರೈತರು ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಸೊರಬವನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದು ಶಾಸಕ ಮಧು ಬಂಗಾರಪ್ಪಹೇಳಿದ್ದಾರೆ.
ಬುಧವಾರ ತಾಲೂಕಿನ ಅಂಡಿಗೆ ಗ್ರಾಮ ಪಂಚಾಯತ್‌ನ ಭಾರತ್ ನಿರ್ಮಾಣ್ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಬರದ ಛಾಯೆ ಹೆಚ್ಚು ಆವರಿಸಿದ್ದು, ಡಿಸೆಂಬರ್‌ನ ಬಳಿಕ ಕುಡಿಯುವ ನೀರಿಗೂ ತತ್ವಾರ ಪಡಬೇಕಾಗುತ್ತದೆ. ಹಾಗಾಗಿ ಜನರು ತಮ್ಮ ಭಾಗಗಳಲ್ಲಿ ನೀರಿನ ಮೂಲಗಳನ್ನು ರಕ್ಷಿಸಿಕೊಳ್ಳಬೇಕೆಂದರು.
ರೈತರು ವ್ಯವಸಾಯ ಮಾಡಿ ಬದುಕು ಸಾಗಿಸಲು ಕಾಡನ್ನು ಕಡಿದರೆ, ಹಣವಂತರು ಕಾಂಕ್ರಿಟ್ ಕಟ್ಟಡಗಳನ್ನು ಕಟ್ಟಿ ಉದ್ಯಮ ನಡೆಸಲು ಅರಣ್ಯ ನಾಶ ಮಾಡುತ್ತಿರುವುದು ದುರಂತವಾಗಿದೆ. ಇದರಿಂದ ಮಳೆ, ಬೆಳೆ ಇಲ್ಲದೆ ರೈತರು ಬಳಲುವಂತಾಗಿದೆ. ರೈತರ ಬಗರ್ ಹುಕುಂ ಉಳಿಸಲು ಪ್ರಯತ್ನಿಸುವುದಾಗಿ ಮಧು ಭರವಸೆ ನೀಡಿದರು.
ರೈತರ ಬೆಳೆಗಳು ಮಳೆ ಇಲ್ಲದೆ ಒಣಗುತ್ತಿವೆ. ಬೆಳೆದ ಅಲ್ಪಬೆಳೆಗಳೂ ಕೊನೆಯ ಹಂತದಲ್ಲಿ ವಿದ್ಯುತ್‌ನ ತೊಂದರೆಗಳಿಂದಾಗಿ ಇಳುವರಿ ಕಡಿಮೆಯಾಗುತ್ತಿವೆ. ಈ ಬಗ್ಗೆ ಸರಕಾರ ಎಚ್ಚೆತ್ತುಕೊಂಡು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಒದಗಿಸಬೇಕು. ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ಉಳವಿ, ಮಾವಲಿ, ಕುಪ್ಪಗಡ್ಡೆ, ಜಡೆಯಲ್ಲಿ ಗ್ರಿಡ್‌ಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಜಡೆಯ ಗ್ರಿಡ್ ಕೆಲಸ ಮುಗಿದು ಗ್ರಾಹಕರ ಸೇವೆಗೆ ಸಜ್ಜಾಗಿದೆ. ಮಾವಲಿಯ ಗ್ರಿಡ್ ನಿರ್ಮಾಣಕ್ಕೆ ಸ್ಥಳ ನಿಗದಿಯಾಗಿ ಸಧ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಅಂಡಿಗೆ ಗ್ರಾಪಂ ಅಧ್ಯಕ್ಷ ಎ.ಎಸ್. ಹೇಮಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಭಾಗ್ಯಾ ಈಶ್ವರಪ್ಪ, ಸದಸ್ಯರಾದ ಲೋಕೇಶ್, ನಿರಂಜನ ಮೂರ್ತಿ, ಬಸವರಾಜ್ ಅಕ್ಕಿ, ಜಯಶೀಲಾ ರಮೇಶ್, ಅನಿತಾ ಮಲ್ಲಿಕಾರ್ಜುನ, ಶೋಭಾಹೂವಪ್ಪ, ಜಿ.ಪಂ. ಸದಸ್ಯ ಸತೀಶ್, ಎಂ. ಅರ್ಜುನಪ್ಪ, ತಾ.ಪಂ. ಸದಸ್ಯೆ ಮೀನಾಕ್ಷಿ ನಿರಂಜನ ಮೂರ್ತಿ, ಕೊಡಕಣಿ ಗ್ರಾಪಂ ಅಧ್ಯಕ್ಷೆ ನಾಗರತಾ ್ನಬಸಪ್ಪ, ಮಾವಲಿ ಗ್ರಾಪಂ ಅಧ್ಯಕ್ಷ ಶಿವಕುಮಾರ್, ಬಿಳವಾಣಿ ಗ್ರಾಪಂ ಅಧ್ಯಕ್ಷ ಸುರೇಶ್, ರುದ್ರಪ್ಪ ನಾಯಕ್, ಹೊಳೆಯಪ್ಪ, ಮಂಜಪ್ಪ ಶಾಂತಗೇರಿ ಮತ್ತಿತರರು ಉಪಸ್ಥಿತರಿದ್ದರು.







