56 ಇಂಚಿನ ಎದೆ ರೈತರದು, ಮೋದಿಯದ್ದಲ್ಲ: ಸಿಂಧಿಯಾ
ಮೊರೆನಾ(ಮ.ಪ್ರ.),ಅ.5: ಎಲ್ಲ ಪ್ರತಿಕೂಲಗಳ ನಡುವೆಯೂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ರೈತರ ಎದೆ 56 ಇಂಚಿನದ್ದಾಗಿಯೇ ಹೊರತು ಪ್ರಧಾನಿಯದ್ದಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ನರೇಂದ್ರ ಮೋದಿಯವರನ್ನು ಮೂದಲಿಸಿದ್ದಾರೆ. ಮಂಗಳವಾರ ಜಿಲ್ಲೆಯ ಅಂಬ್ಹಾ ಪಟ್ಟಣದಲ್ಲಿ ರೈತರ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ರೈತರ ಸಮಸ್ಯೆಗಳನ್ನು ಚರ್ಚಿಸಲು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನವನ್ನು ನಡೆಸಲಾಗಿತ್ತಾದರೂ ಕಳೆದ ಮೂರು ವರ್ಷಗಳಿಂದಲೂ ಅವರಿಗೆ ಪರಿಹಾರವನ್ನು ವಿತರಿಸುವಲ್ಲಿ ಮಧ್ಯಪ್ರದೇಶದ ಬಿಜೆಪಿ ಸರಕಾರವು ವಿಫಲಗೊಂಡಿದೆ ಎಂದು ಆರೋಪಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಬರ, ಅತಿವೃಷ್ಟಿಯಂತಹ ಪ್ರತಿಕೂಲ ಹವಾಮಾನ ಸ್ಥಿತಿ ಗಳಿಂದಾಗಿ ರೈತರ ಬವಣೆ ಮುಂದುವರಿದಿದೆ ಎಂದು ಅವರು ನೋವು ವ್ಯಕ್ತಪಡಿಸಿದರು. ವಿದ್ಯುತ್, ಬೀಜಗಳು ಮತ್ತು ರಸಗೊಬ್ಬರಗಳ ಕೊರತೆಯಿದ್ದರೂ ರೈತರು ದೇಶಕ್ಕಾಗಿ ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಿದ್ದಾರೆ, ಅವರು ಗೌರವಕ್ಕೆ ಅರ್ಹರಾಗಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕರಾಗಿರುವ ಸಿಂದಿಯಾ ಹೇಳಿದರು. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪಾವತಿಸಲು ಮೋದಿ ಸರಕಾರವು ವಿಫಲಗೊಂಡಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರಕಾರದ ಆಡಳಿತವಿದ್ದಾಗ ದೇಶದ ಕೃಷಿ ಪ್ರಗತಿ ದರ ಶೇ.4.5ರಷ್ಟಿತ್ತು, ಆದರೆ ಅದೀಗ ಕೇವಲ ಶೇ.1ಕ್ಕೆ ಕುಸಿದಿದೆ ಎಂದರು.
‘ಅಚ್ಛೇ ದಿನ್’ಗಳು ಎಲ್ಲಿವೆ ಎಂದು ಪ್ರಶ್ನಿಸಿದ ಅವರು, ಗಗನಕ್ಕೇರಿರುವ ಹಣದುಬ್ಬರ ಶ್ರೀಸಾಮಾನ್ಯನನ್ನು ಸಂಕಷ್ಟಕ್ಕೆ ತಳ್ಳಿದೆ. ಇಂತಹ ಸ್ಥಿತಿಯಲ್ಲಿ ಪ್ರಧಾನಿಯವರು ‘ಆಟಾ’ದ ಬದಲು ‘ಡಾಟಾ’ದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ಸಿಂಧಿಯಾ ಕುಟುಕಿದರು.







