ಇನ್ನಷ್ಟು ತನಿಖೆಗೆ ಸಿಬಿಐಗೆ ಹೈಕೋರ್ಟ್ ನಿರ್ದೇಶ
ಆದರ್ಶ ಹಗರಣ
ಮುಂಬೈ,ಅ.5: ಹಗರಣದ ಸುಳಿಯಲ್ಲಿ ಸಿಲುಕಿರುವ ಇಲ್ಲಿಯ ಆದರ್ಶ ಸೊಸೈಟಿಯಲ್ಲಿನ ಬೇನಾಮಿ ಫ್ಲಾಟ್‌ಗಳ ಕುರಿತು ಇನ್ನಷ್ಟು ತನಿಖೆಯನ್ನು ನಡೆಸುವಂತೆ ಬಾಂಬೆ ಉಚ್ಚ ನ್ಯಾಯಾಲಯವು ಸಿಬಿಐಗೆ ನಿರ್ದೇಶ ನೀಡಿದೆ.
ಸಾಮಾಜಿಕ ಕಾರ್ಯಕರ್ತ ಪ್ರವೀಣ ವಾಟೆಗಾಂವಕರ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಾಲಯವು ಈ ನಿರ್ದೇಶವನ್ನು ನೀಡಿದೆ. ಹಲವಾರು ನಿಯಮಾವಳಿಗಳನ್ನು ಉಲ್ಲಂಘಿಸಿ ಆದರ್ಶ ಸೊಸೈ ಟಿಯ ಕಡತಗಳಿಗೆ ಹಸಿರು ನಿಶಾನೆ ತೋರಿಸಿದ್ದಕ್ಕೆ ಪ್ರತಿಫಲವಾಗಿ ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಬೇನಾಮಿ ಫ್ಲಾಟ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ವಾಟೆಗಾಂವಕರ್ ಆರೋಪಿಸಿದ್ದಾರೆ.
ತಾನೀಗಾಗಲೇ ತನಿಖೆಯನ್ನು ಪೂರ್ಣಗೊಳಿಸಿದ್ದೇನೆ ಮತ್ತು ಎರಡು ವರ್ಷಗಳ ಹಿಂದೆಯೇ ಆರೋಪ ಪಟ್ಟಿಯನ್ನು ಸಲ್ಲಿಸಿದ್ದೇನೆ ಎಂಬ ಸಿಬಿಐ ಹೇಳಿಕೆಯನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ. ಅದು ಹಿಂದೆ ಸಲ್ಲಿಸಿದ್ದ ಎರಡು ತನಿಖಾ ವರದಿಗಳನ್ನು ನ್ಯಾಯಾಲಯವು ತಿರಸ್ಕರಿಸಿತ್ತು.
ಈ ಹಿಂದಿನ ಎರಡು ವರದಿಗಳನ್ನು ಸಿದ್ಧಗೊಳಿಸುವಾಗ ತನಿಖಾಧಿಕಾರಿಗಳು ತಮ್ಮ ವಿವೇಚನೆಯನ್ನು ಬಳಸಿಲ್ಲ ಎನ್ನುವುದನ್ನು ನಾವು ಗಮನಿಸಿದ್ದೇವೆ. ತನಿಖೆಯನ್ನು ಕೈಗೊಂಡ ರೀತಿ ನಮಗೆ ತೃಪ್ತಿಯನ್ನುಂಟು ಮಾಡಿಲ್ಲ. ಹೀಗಾಗಿ ಅರ್ಜಿಯಲ್ಲಿ ಮಾಡಲಾಗಿರುವ ನಿರ್ದಿಷ್ಟ ಆರೋಪಗಳ ಬಗ್ಗೆ ಇನ್ನಷ್ಟು ತನಿಖೆ ನಡೆಸುವಂತೆ ಮತ್ತು ಡಿ.16ರೊಳಗೆ ವರದಿಯನ್ನು ಸಲ್ಲಿಸುವಂತೆ ನಾವು ಸಿಬಿಐಗೆ ನಿರ್ದೇಶ ನೀಡುತ್ತಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಎ.ಎ.ಸಯೀದ್ ಅವರ ವಿಭಾಗೀಯ ಪೀಠವು ಸ್ಪಷ್ಟಪಡಿಸಿತು.





