ಪಾಕಿಸ್ತಾನಿ ಕಲಾವಿದರು ಭಾರತದಲ್ಲಿ ಕೆಲಸ ಮಾಡುವುದನ್ನು ಬೆಂಬಲಿಸುವುದಿಲ್ಲ: ಹೇಮಮಾಲಿನಿ
ಮುಂಬೈ, ಅ.5: ತಾನು ಪಾಕಿಸ್ತಾನಿ ಕಲಾವಿದರು ಭಾರತದಲ್ಲಿ ಕೆಲಸ ಮಾಡುವುದಕ್ಕೆ ವಿರುದ್ಧವಾಗಿದ್ದೇನೆಂದು ಹಿರಿಯ ನಟಿ ಹಾಗೂ ಬಿಜೆಪಿ ಸಂಸದೆ ಹೇಮಮಾಲಿನಿ ಹೇಳಿದ್ದಾರೆ. ಅವರು ನಿನ್ನೆಯಷ್ಟೇ ಈ ಕುರಿತು ಖಚಿತ ಉತ್ತರ ನೀಡಲು ನಿರಾಕರಿಸಿದ್ದರು.
ಕಳೆದ ತಿಂಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಸೀಮಿತ ದಾಳಿ ನಡೆಸಿದುದಕ್ಕಾಗಿ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ.
ಸೀಮಿತ ದಾಳಿ ನಡೆಸುವ ಮೂಲಕ ನಮ್ಮ ಸೇನೆ ಮಹತ್ಕಾರ್ಯವೊಂದನ್ನು ಮಾಡಿದೆ. ಇಡೀ ದೇಶವೇ ಅವರನ್ನು ಬೆಂಬಲಿಸಬೇಕು. ಅದಕ್ಕೆ ಪುರಾವೆ ಯಾಕೆ ಕೇಳಬೇಕು? ಅದು ಕಂಡುಕೇಳರಿಯದ ವಿಷಯವಾಗಿದೆಯೆಂದು ಹೇಮಮಾಲಿನಿ ಹೇಳಿದ್ದಾರೆ.
ಅವರು ಮಂಗಳವಾರ, ಪಾಕಿಸ್ತಾನಿ ನಟರ ಕೆಲಸವನ್ನು ತಾನು ಮೆಚ್ಚುತ್ತೇನೆ ಎಂದಿದ್ದರು. ಆದಾಗ್ಯೂ, ಅವರಿಗೆ ಭಾರತದಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕೇ ಬೇಡವೇ ಎಂಬ ಕುರಿತು ಏನೂ ಹೇಳಿರಲಿಲ್ಲ.
ಈ ವಿವಾದಾತ್ಮಕ ಪ್ರಶ್ನೆಯ ಬಗ್ಗೆ ತಾನೇನೂ ಹೇಳ ಬಯಸುವುದಿಲ್ಲ. ಆದರೆ, ತಾವೂ ಕಲಾವಿದರಾಗಿದ್ದೇವೆ. ಇಲ್ಲಿಗೆ ನಟಿಸಲು ಬಂದಿರುವ ಪಾಕಿಸ್ತಾನಿ ನಟರೂ ಅಷ್ಟೇ ಎಂದು ಮಾತ್ರ ತಾನು ಹೇಳಬಲ್ಲೆನೆಂದು ಹೇಮಮಾಲಿನಿ ತಿಳಿಸಿದ್ದರು.
19 ಮಂದಿ ಸೈನಿಕರ ಸಾವಿಗೆ ಕಾರಣವಾದ ಉರಿ ಭಯೋತ್ಪಾದಕ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಅದು ಶಮನವಾಗುವ ವರೆಗೂ ಪಾಕಿಸ್ತಾನಿ ಕಲಾವಿದರು ಭಾರತದಲ್ಲಿ ಕೆಲಸ ಮಾಡುವುದನ್ನು ನಿಷೇಧಿಸುವ ನಿರ್ಣಯವೊಂದನ್ನು ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘಟನೆ ಕೈಗೊಂಡಿದೆ.





