ಭಾರತದ ವಿರುದ್ಧ ಮಾರ್ಶಲ್ ಐಲ್ಯಾಂಡ್ಸ್ ಹೂಡಿದ್ದ ಅಣ್ವಸ್ತ್ರ ಮೊಕದ್ದಮೆ ಜಾಗತಿಕ
ನ್ಯಾಯಾಲಯದಲ್ಲಿ ವಜಾ
ವಿಶ್ವಸಂಸ್ಥೆ, ಅ.5: ಅಣ್ವಸ್ತ್ರ ಸ್ಪರ್ಧೆಯನ್ನು ತಡೆಯಲು ವಿಫಲವಾಗಿದೆಯೆಂದು ಆರೋಪಿಸಿ, ಭಾರತದ ವಿರುದ್ಧ ಪುಟ್ಟ ದ್ವೀಪ ರಾಷ್ಟ್ರ ಮಾರ್ಶಲ್ ಐಲ್ಯಾಂಡ್ಸ್ ಹೂಡಿದ್ದ ಮೊಕದ್ದಮೆಯನ್ನು ಕೈಗೆತ್ತಿಕೊಳ್ಳಲು ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯವು ನಿರಾಕರಿಸಿದೆ.
ಈ ಪ್ರಕರಣವನ್ನು ವಿಚಾರಿಸಲು ಜಾಗತಿಕ ನ್ಯಾಯಾಲಯಕ್ಕೆ(ಐಸಿಜೆ) ಅಧಿಕಾರ ವ್ಯಾಪ್ತಿ ಇಲ್ಲವೆಂಬ ಭಾರತದ ವಾದವನ್ನು ತಾನು ಒಪ್ಪಿದ್ದೇನೆಂದು ಅಂತಾರಾಷ್ಟ್ರೀಯ ನ್ಯಾಯಾ ಲಯದ 16 ಸದಸ್ಯರ ಪೀಠವೊಂದು ಹೇಳಿದೆ.
ಶೀತಲ ಸಮರದ ಶಸ್ತ್ರಾಸ್ತ್ರ ಸ್ಪರ್ಧೆಯು ಗರಿ ಕೆದರಿದ್ದಾಗ, ಈ ಪುಟ್ಟ ಪೆಸಿಫಿಕ್ ದ್ವೀಪ ರಾಷ್ಟ್ರವು 1946-58ರಲ್ಲಿ ಅಮೆರಿಕ ನಡೆಸಿದ್ದ ಸರಣಿ ಪರಮಾಣು ಪರೀಕ್ಷೆಗಳಿಗೆ ಗ್ರೌಂಡ್ ಝೀರೊ ಆಗಿತ್ತು. ಆದುದರಿಂದ, ಅಂತಹ ಅಸ್ತ್ರಗಳ ವಿನಾಶಕಾರಿ ಪರಿಣಾಮದ ಕುರಿತು ತಾನು ಪುರಾವೆ ನೀಡಬಲ್ಲ ಅಧಿಕಾರ ಪಡೆದಿದ್ದೇನೆಂದು 55 ಸಾವಿರ ಜನಸಂಖ್ಯೆಯ ದೇಶ ಪ್ರತಿಪಾದಿಸಿತ್ತು.
9 ದೇಶಗಳು 1968ರ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕಲು ವಿಫಲವಾಗಿವೆಯೆಂದು 2014ರಲ್ಲಿ ಮಜುರೊ ಪ್ರಾಥಮಿಕವಾಗಿ ಆರೋಪಿಸಿದ್ದರು. ಆದರೆ, ರಾಷ್ಟ್ರಗಳ ನಡುವಿನ ವಿವಾದಗಳ ಇತ್ಯರ್ಥಕ್ಕೆ 1945ರಲ್ಲಿ ಹೇಗ್‌ನಲ್ಲಿ ಸ್ಥಾಪಿಸಲಾಗಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು, ಬ್ರಿಟನ್, ಭಾರತ ಹಾಗೂ ಪಾಕಿಸ್ತಾನಗಳ ವಿರುದ್ಧದ ಮೂರು ಪ್ರಕರಣಗಳ ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ತನಗಿದೆಯೇ ಎಂಬುದನ್ನು ಮಾತ್ರ ನಿರ್ಧರಿಸಲಿದೆ.
ಚೀನ, ಫ್ರಾನ್ಸ್, ಇಸ್ರೇಲ್, ಉತ್ತರಕೊರಿಯ, ರಶ್ಯ ಹಾಗೂ ಅಮೆರಿಕಗಳು ನ್ಯಾಯಾಲಯದ ನ್ಯಾಯಾಂಗ ವ್ಯಾಪ್ತಿಯನ್ನು ಮಾನ್ಯ ಮಾಡಿಲ್ಲ. ಇಸ್ರೇಲ್ ತನ್ನಲ್ಲಿ ಅಣ್ವಸ್ತ್ರವಿದೆಯೆಂಬುದನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ.





