ಕಿವೀಸ್ ವಿರುದ್ಧ ಏಕದಿನ ಸರಣಿ: ಇಂದು ಟೀಮ್ ಇಂಡಿಯಾ ಆಯ್ಕೆ
ಹೊಸದಿಲ್ಲಿ, ಅ.5: ಮಾಜಿ ವಿಕೆಟ್‌ಕೀಪರ್ ಎಂಎಸ್‌ಕೆ ಪ್ರಸಾದ್ ಅಧ್ಯಕ್ಷತೆಯ ನೂತನ ಆಯ್ಕೆ ಸಮಿತಿ ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ತಂಡವನ್ನು ಗುರುವಾರ ಸಂಜೆ 4 ಗಂಟೆಗೆ ಆಯ್ಕೆ ಮಾಡಲಿದೆ ಎಂದು ಬಿಸಿಸಿಐ ತಿಳಿಸಿದೆ.
ಸೆ.21 ರಂದು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಪ್ರಸಾದ್ ಇತರ ನಾಲ್ವರು ಸದಸ್ಯರಾದ ಗಗನ್ ಖೋಡ, ಶರಣ್‌ದೀಪ್ ಸಿಂಗ್,ದೇವಾಂಗ್ ಗಾಂಧಿ ಹಾಗೂ ಜತಿನ್ ಪರಾಂಜಪೆ ಅವರೊಂದಿಗೆ ಇದೇ ಮೊದಲ ಬಾರಿ ಸಭೆ ನಡೆಸಲಿದ್ದಾರೆ.
ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಅ.16 ರಂದು ಧರ್ಮಶಾಲಾದಲ್ಲಿ ನಡೆಯುವುದು. ಐದು ಪಂದ್ಯಗಳ ಸರಣಿ ಅಕ್ಟೋಬರ್ 29 ರಂದು ವಿಶಾಖಪಟ್ಟಣದಲ್ಲಿ ಕೊನೆಗೊಳ್ಳಲಿದೆ. ಎಂಎಸ್ ಧೋನಿ ಏಕದಿನ ತಂಡದ ನಾಯಕನಾಗಿ ಮುಂದುವರಿಯುವ ಸಾಧ್ಯತೆಯಿದೆ.
ಕರ್ನಾಟಕದ ಆರಂಭಿಕ ದಾಂಡಿಗ ಮಾಯಾಂಕ್ ಅಗರವಾಲ್ ಅವರು ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಗೌತಮ್ ಗಂಭೀರ್ ಸೀಮಿತ ಓವರ್ ಕ್ರಿಕೆಟ್‌ಗೆ ವಾಪಸಾಗುವರೇ ಎಂದು ಕಾದುನೋಡಬೇಕಾಗಿದೆ. ಝಿಂಬಾಬ್ವೆ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಫೈಝ್ ಫಝಲ್ ಸ್ಪರ್ಧೆಯಲ್ಲಿದ್ದಾರೆ.
ಮನೀಶ್ ಪಾಂಡೆ, ಬೀರೆಂದ್ರ ಸ್ರಾನ್ ಹಾಗೂ ಜಸ್‌ಪ್ರೀಸ್ ಬುಮ್ರಾ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಪ್ರಸ್ತುತ ಭಾರತ-ನ್ಯೂಝಿಲೆಂಡ್ ತಂಡಗಳು ಟೆಸ್ಟ್ ಸರಣಿಯನ್ನು ಆಡುತ್ತಿದ್ದು, 2-0 ಮುನ್ನಡೆ ಸಾಧಿಸಿರುವ ಭಾರತ ಸರಣಿಯನ್ನು ಗೆದ್ದುಕೊಂಡಿದೆ. ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ಅಕ್ಟೋಬರ್ 8 ರಂದು ಇಂದೋರ್‌ನಲ್ಲಿ ಆರಂಭವಾಗಲಿದೆ.







