ವಾಂಖೆಡೆ ಸ್ಟೇಡಿಯಂಗೆ ಶಾರುಕ್‌ಗೆ ಪ್ರವೇಶ ಮುಕ್ತ ಮುಕ್ತ

ಮುಂಬೈ, ಅ.5: ಮುಂಬೈ ಪೊಲೀಸರು ಕ್ಲೀನ್ ಚಿಟ್ ನೀಡಿರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಇನ್ನು ಮುಂದೆ ವಾಂಖೆಡೆ ಸ್ಟೇಡಿಯಂನೊಳಗೆ ಪ್ರವೇಶಿಸಬಹುದು.
ಮುಂಬೈ ಪೊಲೀಸರು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹ-ಮಾಲಕ ಶಾರುಕ್ ಖಾನ್ 2012ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಭದ್ರತಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ. ಖಾನ್ ಯಾವುದೇ ತಪ್ಪು ಮಾಡಿರಲಿಲ್ಲ ಎಂದು ಹೇಳಿದೆ.
ಸ್ಟೇಡಿಯಂನೊಳಗೆ ನಡೆದ ಘಟನೆಯ ಎಲ್ಲ ತನಿಖೆಯ ಬಳಿಕ ಶಾರುಕ್ ಖಾನ್ ಯಾವುದೇ ಅಪರಾಧ ಎಸೆಗಿಲ್ಲ ಎಂದು ಸ್ಪಷ್ಟವಾಗಿದೆ ಎಂದು ಇತ್ತೀಚೆಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಪೊಲೀಸರು ತಿಳಿಸಿದ್ದಾರೆ.
ವರದಿಯಲ್ಲಿ ನಟನ ಹೇಳಿಕೆಯನ್ನು ಧ್ವನಿಮುದ್ರಣಗೊಳಿಸಿದ್ದು, ಖಾನ್ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮುಂಬೈನಲ್ಲಿ 2012ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡ ಗೆಲುವು ಸಾಧಿಸಿದ ಬಳಿಕ ಶಾರುಕ್ ಖಾನ್ ಹಾಗೂ ಭದ್ರತಾ ಸಿಬ್ಬಂದಿ ವಿಕಾಸ್ ದಳ್ವಿ ನಡುವೆ ಮೈದಾನದೊಳಗೆ ವಾಗ್ವಾದ ನಡೆದಿತ್ತು. ಈ ಘಟನೆಯ ಬಳಿಕ ಮುಂಬೈ ಕ್ರಿಕೆಟ್ ಸಂಸ್ಥೆ ಶಾರುಕ್ ಖಾನ್‌ಗೆ ವಾಂಖೆಡೆ ಸ್ಟೇಡಿಯಂ ಪ್ರವೇಶಿಸದಂತೆ ಐದು ವರ್ಷಗಳ ಕಾಲ ನಿಷೇಧ ವಿಧಿಸಿತ್ತು. ಕಳೆದ ವರ್ಷ ನಿಷೇಧವನ್ನು ಹಿಂಪಡೆದಿತ್ತು.







