ಹುಟ್ಟಿನಿಂದಲೇ ಮಾತುಬಾರದ ಯುವತಿ ಬೌಲಿಂಗ್‌ನಲ್ಲಿ ಮಾತಾಡುತ್ತಾಳೆ!
ಛತ್ತೀಸ್‌ಗಡದಲ್ಲಿದ್ದಾಳೆ ಪ್ರತಿಭಾವಂತ ಕ್ರಿಕೆಟ್ ಆಟಗಾರ್ತಿ ಶ್ರದ್ಧಾ

ರಾಯಿಪುರ, ಅ.5: ಛತ್ತೀಸ್‌ಗಢದ 18ರ ಹರೆಯದ ಕ್ರಿಕೆಟ್ ಆಟಗಾರ್ತಿ ಶ್ರದ್ಧಾ ವೈಷ್ಣವ್ ಅಂಗವೈಕಲ್ಯವನ್ನು ಮೆಟ್ಟಿನಿಂತು ಎಲ್ಲರಿಗೂ ಮಾದರಿಯಾಗಿದ್ದಾರೆ. ಹುಟ್ಟಿನಿಂದಲೇ ಕಿವುಡುತನ ಹಾಗೂ ಮೂಕಿಯಾಗಿರುವ ಈಕೆ ಛತ್ತೀಸ್‌ಗಡದ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ದೇಶದ ಮಹಿಳಾ ತಂಡವೊಂದರಲ್ಲಿ ಸ್ಥಾನ ಪಡೆದ ಮೊದಲ ವಿಕಲಚೇತನ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಛತ್ತೀಸ್‌ಗಡದ ಬಿಲಾಸ್‌ಪುರ ಪಟ್ಟಣದಲ್ಲಿ ಜಯಿಸಿದ್ದ ಶ್ರದ್ಧಾ 13ರ ಹರೆಯದಲ್ಲಿ ಕ್ರಿಕೆಟ್‌ನತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡಲು ಆರಂಭಿಸಿದ್ದ ಈಕೆ ಇದೀಗ ಉತ್ತಮ ಸ್ಪಿನ್ನರ್ ಆಗಿದ್ದಾರೆ.
ಕೆಲವು ದಶಕಗಳ ಹಿಂದೆ ಅಂಜನ್ ಭಟ್ಟಾಚಾರ್ಯ ರೆಗುಲರ್ ರಾಜ್ಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ವಿಕಲಚೇತನ ಕ್ರಿಕೆಟಿಗರಾಗಿದ್ದರು. 1970ರಲ್ಲಿ ರಣಜಿ ಪಂದ್ಯದಲ್ಲಿ ಬಿಹಾರದ ಪರ ಚೊಚ್ಚಲ ಪಂದ್ಯ ಆಡಿದ್ದ ಭಟ್ಟಾಚಾರ್ಯ ಆ ಪಂದ್ಯದಲ್ಲಿ 24 ರನ್‌ಗೆ 7 ವಿಕೆಟ್‌ಗಳನ್ನು ಕಬಳಿಸಿದ್ದರು.
ಕಳೆದ ವಾರ 15 ಸದಸ್ಯರ ರಾಜ್ಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಶ್ರದ್ಧಾ ಆಯ್ಕೆಯಾಗಿದ್ದರು. 90 ಶೇ. ಮೂಕಿ ಹಾಗೂ ಕಿವುಡು ಪುತ್ರಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವುದನ್ನು ಕೇಳಿ ಶ್ರದ್ಧಾಳ ಹೆತ್ತವರಿಗೆ ಅಚ್ಚರಿಯಾಗಿತ್ತು.
‘‘ಶ್ರದ್ಧಾ 13ರ ಹರೆಯದಲ್ಲಿ ತನ್ನ ಕಿರಿಯ ಸಹೋದರನೊಂದಿಗೆ ಕ್ರಿಕೆಟ್ ವೀಕ್ಷಿಸುತ್ತಿದ್ದಳು. ಒಂದು ದಿನ ಆಕೆ ತಾನು ಬೌಲಿಂಗ್ ಮಾಡುವುದಾಗಿ ಹೇಳಿದಳು. ಆಕೆಯನ್ನು ನಾನು ಕ್ರಿಕೆಟ್ ಕೋಚ್ ಹತ್ತಿರ ಕರೆದುಕೊಂಡು ಹೋದೆ. ಅಲ್ಲಿ ಆಕೆ ಪ್ರಾಕ್ಟೀಸ್ ನಡೆಸಿದ್ದಳು. ಕೆಲವೇ ತಿಂಗಳ ಬಳಿಕ ಆಕೆ ಉತ್ತಮ ಸ್ಪಿನ್ ಬೌಲರ್ ಆಗಿ ರೂಪುಗೊಂಡಿದ್ದಳು’’ ಎಂದು ಶ್ರದ್ಧಾಳ ತಂದೆ ರಮೇಶ್ ಹೇಳಿದ್ದಾರೆ.
‘‘ಶ್ರದ್ಧಾ ತನ್ನ ಅಂಗವೈಕಲ್ಯವನ್ನು ಶಕ್ತಿಯಾಗಿ ಪರಿವರ್ತನೆ ಮಾಡಿಕೊಂಡಿದ್ದಳು. ಆಕೆ ತನ್ನ ಬೌಲಿಂಗ್‌ನತ್ತಲೇ ಹೆಚ್ಚು ಗಮನ ನೀಡುತ್ತಾಳೆ. ಆರಂಭದಲ್ಲಿ ಮಧ್ಯಮ ವೇಗದ ಬೌಲರ್ ಆಗಿದ್ದ ಆಕೆ ಇದೀಗ ಫಾಸ್ಟ್-ಲೆಗ್ ಬ್ರೇಕ್‌ನಲ್ಲಿ ಬೌಲಿಂಗ್ ಮಾಡುತ್ತಾಳೆ’’ ಎಂದು ಕೋಚ್ ಮೋಹನ್ ಸಿಂಗ್ ಠಾಕೂರ್ ಹೇಳಿದ್ದಾರೆ.
‘‘ಶ್ರದ್ಧಾಳ ಅದ್ಭುತ ಸಾಧನೆ ಎಲ್ಲರಿಗೂ ಸ್ಫೂರ್ತಿ. ಆಕೆಯ ಯಶಸ್ಸಿನ ಕಥೆ ಕೇಳಿದ ಬಳಿಕ 15 ಬಾಲಕಿಯರು ನಮ್ಮ ಕ್ರಿಕೆಟ್ ಅಕಾಡಮಿ ಸೇರಿದ್ದಾರೆ ಎಂದು ಶ್ರದ್ಧಾಳ ಟ್ರೈನರ್ ಅನಿಲ್ ಠಾಕೂರ್ ಹೇಳಿದ್ದಾರೆ.
‘‘ಕ್ರಿಕೆಟ್ ಆಡಲು ಬಯಸುವ ಎಲ್ಲ ಬಾಲಕಿಯರಿಗೆ ಶ್ರದ್ಧ್ಧಾ ಪ್ರೇರಣೆಯಾಗಿದ್ದಾರೆ. ಆರಂಭದಲ್ಲಿ ಶ್ರದ್ದಾಳ ಸಹ ಆಟಗಾರ್ತಿಯರಿಗೆ ಆಕೆ ಏನು ಹೇಳುತ್ತಿದ್ದಾಳೆಂದು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಆದರೆ, ಇದೀಗ ಶ್ರದ್ಧಾ ತನ್ನ ಬೌಲಿಂಗ್‌ನ ಮೂಲಕವೇ ಮಾತನಾಡುತ್ತಾಳೆ’’ ಎಂದು ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಬಲ್‌ದೇವ್ ಸಿಂಗ್ ಹೇಳಿದ್ದಾರೆ.







