ಭಾರತದಲ್ಲಿ ನಡೆಯುವ ಕಬಡ್ಡಿ ವಿಶ್ವಕಪ್‌ಗೆ ಪಾಕಿಸ್ತಾನಕ್ಕೆ ಪ್ರವೇಶವಿಲ್ಲ

ಹೊಸದಿಲ್ಲಿ, ಅ.5: ಭಾರತದಲ್ಲಿ ಈ ವಾರ ಆರಂಭವಾಗಲಿರುವ 12 ದೇಶಗಳು ಭಾಗವಹಿಸಲಿರುವ ಕಬಡ್ಡಿ ವಿಶ್ವಕಪ್‌ನಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಟೂರ್ನಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ.
ಶುಕ್ರವಾರ ಆರಂಭವಾಗಲಿರುವ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಬಲಿಷ್ಠ ಇರಾನ್ ತಂಡ ಚೊಚ್ಚಲ ಟೂರ್ನಿ ಆಡುತ್ತಿರುವ ಅಮೆರಿಕ ತಂಡವನ್ನು ಎದುರಿಸಲಿದೆ.
ಟೂರ್ನಿಯಲ್ಲಿ ಅಗ್ರ ತಂಡಗಳಾದ ಆಸ್ಟ್ರೇಲಿಯ, ದಕ್ಷಿಣ ಕೊರಿಯಾ, ಇಂಗ್ಲೆಂಡ್, ಪೊಲೆಂಡ್, ಕೀನ್ಯ ಹಾಗೂ ಅರ್ಜೆಂಟೀನ ತಂಡಗಳು ಭಾಗವಹಿಸಲಿವೆ. ಅಹ್ಮದಾಬಾದ್‌ನಲ್ಲಿ ಎರಡು ವಾರಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಬಲಿಷ್ಠ ಪಾಕಿಸ್ತಾನ ತಂಡ ಈ ಬಾರಿ ಸ್ಪರ್ಧಿಸುವುದಿಲ್ಲ.
ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ವಾತಾವರಣವಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಪಾಕಿಸ್ತಾನದೊಂದಿಗೆ ಆಡುವುದಕ್ಕೆ ಇದು ಸರಿಯಾದ ಸಮಯವಲ್ಲ. ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್(ಐಕೆಎಫ್)ನಲ್ಲಿ ಪಾಕಿಸ್ತಾನ ಪ್ರಮುಖ ತಂಡವಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಉಭಯ ದೇಶಗಳ ಹಿತದೃಷ್ಟಿಯಿಂದ ಕಬಡ್ಡಿ ಚಾಂಪಿಯನ್‌ಶಿಪ್‌ನಿಂದ ಪಾಕಿಸ್ತಾನವನ್ನು ಹೊರಗಿಡಲು ನಿರ್ಧರಿಸಿದ್ದೇವೆ ಎಂದು ಐಕೆಎಫ್ ಮುಖ್ಯಸ್ಥ ಚತುರ್ವೇದಿ ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ಸಭೆ ಕರೆಯುವಂತೆ ನಾವು ಆಗ್ರಹಿಸಿದ್ದೆವು. ಪಾಕಿಸ್ತಾನವಿಲ್ಲದೆ ಕಬಡ್ಡಿ ವಿಶ್ವಕಪ್‌ಗೆ ಮಹತ್ವವಿರದು. ಪಾಕ್ ತಂಡ ಭಾಗವಹಿಸದೇ ಇರುವುದು ಬ್ರೆಝಿಲ್ ಇಲ್ಲದ ಫುಟ್ಬಾಲ್ ವಿಶ್ವಕಪ್ ನಡೆದಂತಾಗುತ್ತದೆ. ಐಕೆಎಫ್ ಪಾಕಿಸ್ತಾನವನ್ನು ವಿನಾಕಾರಣ ಗುರಿ ಮಾಡುತ್ತಿದೆ. ಟೂರ್ನಿಗೆ ಭದ್ರತಾ ಭೀತಿ ಎದುರಾದರೆ ಎರಡೂ ತಂಡವನ್ನು ಹೊರಗಿಡಬೇಕಾಗಿತ್ತು ಎಂದು ಪಾಕಿಸ್ತಾನ ಕಬಡ್ಡಿ ಫೆಡರೇಶನ್‌ನ ಕಾರ್ಯದರ್ಶಿ ರಾಣಾ ಮುಹಮ್ಮದ್ ಸರ್ವಾರ್ ಹೇಳಿದ್ದಾರೆ.
‘‘ಮೇನಲ್ಲಿ ಪಾಕಿಸ್ತಾನದಲ್ಲಿ ನಡೆದ ಆರು ರಾಷ್ಟ್ರಗಳು ಭಾಗವಹಿಸಿದ್ದ ಕಬಡ್ಡಿ ಕಪ್‌ನಲ್ಲಿ ಭಾರತವನ್ನು ಮಣಿಸಿದ್ದ ನಮ್ಮ ಆಟಗಾರರು ಪ್ರಶಸ್ತಿ ಜಯಿಸಿದ್ದರು. ಕಳೆದ ತಿಂಗಳು ವಿಯೆಟ್ನಾಂನಲ್ಲಿ ನಡೆದ ಏಷ್ಯಾ ಬೀಚ್ ಗೇಮ್ಸ್‌ನಲ್ಲಿ ನಾವು ಜಯಶಾಲಿಯಾಗಿದ್ದೆವು. ಈ ಬಾರಿಯಲ್ಲಿ ಭಾರತವನ್ನು ಮಣಿಸಿ ವಿಶ್ವಕಪ್‌ನ್ನು ಜಯಿಸುವ ವಿಶ್ವಾಸದಲ್ಲಿದ್ದೆವು. ಇದೀಗ ನಮ್ಮ ತಂಡವನ್ನು ವಿಶ್ವಕಪ್‌ನಿಂದ ಹೊರಗಿಟ್ಟು ಎರಡೂ ದೇಶಗಳ ಕಬಡ್ಡಿ ಅಭಿಮಾನಿಗಳಿಗೆ ನಿರಾಸೆವುಂಟು ಮಾಡಲಾಗಿದೆ’’ಎಂದು ಪಾಕ್ ಕಬಡ್ಡಿ ತಂಡದ ನಾಯಕ ನಾಸಿರ್ ಅಲಿ ಹೇಳಿದ್ದಾರೆ.
2007 ಹಾಗೂ 2004ರಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಇರಾನ್ ತಂಡ ಭಾರತದ ವಿರುದ್ಧ ಸೋತಿತ್ತು. ಈ ಬಾರಿಯ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ತಂಡ ದಕ್ಷಿಣ ಕೊರಿಯವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ರೌಂಡ್ ರಾಬಿನ್ ಮಾದರಿಯ ಟೂರ್ನಿಯಲ್ಲಿ ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿ ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಅಕ್ಟೋಬರ್ 22 ರಂದು ಫೈನಲ್ ಪಂದ್ಯ ನಡೆಯಲಿದೆ.







