ಏಕದಿನ ಇತಿಹಾಸದಲ್ಲಿ 2ನೆ ಶ್ರೇಷ್ಠ ಸ್ಕೋರ್ ಬೆನ್ನಟ್ಟಿದ ದಕ್ಷಿಣ ಆಫ್ರಿಕ
ಡೇವಿಡ್ ಮಿಲ್ಲರ್ ಮಿಂಚಿನ ಶತಕ

ಕಿಂಗ್ಸ್‌ಮೀಡ್, ಅ.6: ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕ ತಂಡ ಆಸ್ಟ್ರೇಲಿಯದ ವಿರುದ್ಧ ಮತ್ತೊಮ್ಮೆ ಪರಾಕ್ರಮ ಮೆರೆದಿದೆ. ಆಸೀಸ್ ನೀಡಿದ್ದ ಏಕದಿನ ಕ್ರಿಕೆಟ್‌ನ ಎರಡನೆ ಸಾರ್ವಕಾಲಿಕ ಶ್ರೇಷ್ಠ ಗುರಿ 372 ರನ್‌ನ್ನು ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಾಗಲೇ ಯಶಸ್ವಿಯಾಗಿ ಬೆನ್ನಟ್ಟಿದೆ.
ಸರಿಯಾಗಿ 10 ವರ್ಷಗಳ ಹಿಂದೆ 2006ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧವೇ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಗರಿಷ್ಠ ಸ್ಕೋರ್ 435ನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿದ್ದ ದಕ್ಷಿಣ ಆಫ್ರಿಕ ಹೊಸ ದಾಖಲೆ ಬರೆದಿತ್ತು. ಇದೀಗ ಅದೇ ತಂಡದ ವಿರುದ್ಧ ಏಕದಿನ ಪಂದ್ಯದಲ್ಲಿ ದಾಖಲಿಸಲ್ಪಟ್ಟ 2ನೆ ಗರಿಷ್ಠ ಮೊತ್ತವನ್ನು(372) ಬೆನ್ನಟ್ಟುವ ಮೂಲಕ ವಿಶ್ವದ ಗಮನ ತನ್ನತ್ತ ಸೆಳೆದಿದೆ.
ಬುಧವಾರ ರಾತ್ರಿ ಇಲ್ಲಿ ನಡೆದ ಮೂರನೆ ಏಕದಿನ ಪಂದ್ಯದಲ್ಲಿ ಮಿಂಚಿನ ಶತಕ ಬಾರಿಸಿದ ಡೇವಿಡ್ ಮಿಲ್ಲರ್ (ಔಟಾಗದೆ 118 ರನ್, 79 ಎಸೆತ, 10 ಬೌಂಡರಿ, 6 ಸಿಕ್ಸರ್) ದಕ್ಷಿಣ ಆಫ್ರಿಕ ತಂಡ ಆಸ್ಟ್ರೇಲಿಯ ವಿರುದ್ಧ ಅಸಾಮಾನ್ಯ ಗೆಲುವು ತಂದುಕೊಡಲು ಮುಖ್ಯ ಪಾತ್ರವಹಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಮಿಲ್ಲರ್ 45 ಎಸೆತಗಳಲ್ಲಿ ಅಧರ್ಶತಕ ಹಾಗೂ ಕೇವಲ 69 ಎಸೆತಗಳಲ್ಲಿ ಶತಕ ಬಾರಿಸಿ ಆಸ್ಟ್ರೇಲಿಯ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಈ ಮೂಲಕ ಆಫ್ರಿಕ ತಂಡ ಆಸೀಸ್ ವಿರುದ್ಧ ಏಳು ವರ್ಷಗಳ ಬಳಿಕ ದ್ವಿಪಕ್ಷೀಯ ಏಕದಿನ ಸರಣಿ ಜಯಿಸಲು ನೆರವಾದರು. ಆಫ್ರಿಕ ಐದು ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆಯಲ್ಲಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್(117) ಹಾಗೂ ನಾಯಕ ಸ್ಟೀವನ್ ಸ್ಮಿತ್(108) ಶತಕದ ಸಹಾಯದಿಂದ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 371 ರನ್ ಕಲೆ ಹಾಕಿತ್ತು.
ಗೆಲ್ಲಲು 372 ರನ್ ಗುರಿ ಪಡೆದಿದ್ದ ಆಫ್ರಿಕ ತಂಡಕ್ಕೆ ಮೊದಲ ವಿಕೆಟ್‌ನಲ್ಲಿ 66 ರನ್ ಸೇರಿಸಿದ ಕ್ವಿಂಟನ್ ಡಿಕಾಕ್(70) ಹಾಗೂ ಹಾಶಿಮ್ ಅಮ್ಲ(45) ಉತ್ತಮ ಆರಂಭವನ್ನೇ ನೀಡಿದ್ದರು. ಆದರೆ, 31ನೆ ಓವರ್‌ನಲ್ಲಿ 217 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕ ಸೋಲುವ ಭೀತಿಯಲ್ಲಿತ್ತು.
ಆಗ 6ನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಮಿಲ್ಲರ್ ಬಾಲಂಗೋಚಿ ಆ್ಯಂಡಿಲ್ ಫೆಲುಕ್ವಾಯೊ(ಔಟಾಗದೆ 42) ಅವರೊಂದಿಗೆ 7ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 107 ರನ್ ಸೇರಿಸಿ ತಂಡ 49.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 372 ರನ್ ಗಳಿಸಲು ನೆರವಾದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.







