ಸಹೋದರ ಧರ್ಮದ ಕುಟುಂಬದ ಕರುಣಾಜನಕ ಕಥೆ
ಮಗಳ ಮದುವೆಗಾಗಿ ವಿಧವೆಯ ಹೋರಾಟ

ಇದೊಂದು ಸಹೋದರ ಧರ್ಮದ ಕುಟುಂಬದ ಕರುಣಾಜನಕ ಕಥೆ. ಅವರ ಸ್ಥಿತಿಯನ್ನು ಅವರ ಮನೆಗೆ ಭೇಟಿ ನೀಡಿದ ನಾನು ಸಹಿತ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅವರು ಕಣ್ಣಾರೆ ಕಂಡಾಗ ತುಂಬಾ ನೋವಾಯಿತು. ಆದ್ದರಿಂದ ಇಲ್ಲಿ ನಿಮ್ಮ ಮುಂದೆ ತೆರೆದಿಟ್ಟಿದ್ದೇನೆ.
ಪತಿ ಬಿಲ್ಲವ. ಪತ್ನಿ ಬಂಟ ಸಮುದಾಯ. ಪ್ರೀತಿಸಿ ಮದುವೆಯಾದವರು. ಮಂಗಳೂರು ಮೂಲದವರು. ಪತಿ ಹಿಂದೂ ಸಂಘಟನೆಯೊಂದರ ನೇತಾರ. ಸಂಘಟನೆ ಮೂಲಕ ದ.ಕ. ಜಿಲ್ಲೆಯಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದವರು. ದುರದೃಷ್ಟವಶಾತ್ ಅನಾರೋಗ್ಯದಿಂದ ಕಳೆದ 9 ವರ್ಷದ ಹಿಂದೆ 42 ರ ಹರೆಯದಲ್ಲಿ ಪತಿ ಇಹಲೋಕ ತ್ಯಜಿಸಿದರು. ಆ ಮೂಲಕ ಅಕ್ಷರಶಃ ಅವರ ವಿಧವೆ ಪತ್ನಿ, ಎರಡು ಹೆಣ್ಣು ಮತ್ತು ಓರ್ವ ಗಂಡುಮಗು ಸೇರಿ ಮೂವರು ಮಕ್ಕಳು ಅನಾಥರಾದರು. ಮೊದಲೇ ಪ್ರೀತಿಸಿ ಮದುವೆಯಾದುದರಿಂದ ಗಂಡನ ಕುಟುಂಬ ಇವರನ್ನು ಹತ್ತಿರ ಮಾಡಿಕೊಂಡಿಲ್ಲ. ವಿಧವೆ ಪತ್ನಿಗೆ ತಾಯಿ ಮತ್ತು ತಂಗಿ ಬಿಟ್ಟರೆ ಸಹೋದರರಿಲ್ಲ. ಬೀದಿಗೆ ಬಂದ ಅನಾಥ ಕುಟುಂಬಕ್ಕೆ ವಿಧವೆ ಪತ್ನಿಯ ವೃದ್ಧ ತಾಯಿ ತನ್ನ ಮನೆಯ ಬದಿಯಲ್ಲಿ ಶೀಟ್ ಹಾಸಿದ ಜೋಪಡಿಯಲ್ಲಿ ವಾಸಿಸಲು ಏರ್ಪಾಡು ಮಾಡಿದ್ದಾರೆ. ಅದರಲ್ಲಿರೋದು ಒಂದು ಕೋಣೆ ಮತ್ತು ಒಂದು ಕಿಚನ್. ಸರಿಯಾಗಿ ಕಾಲು ಹಾಸಿ ಮಲಗಲೂ ಜಾಗವಿಲ್ಲ.
ವಿಷಯ ಅದಲ್ಲ. ಈಗ ಆ ಅನಾಥ ಕುಟುಂಬದ ದೊಡ್ಡ ಮಗಳಿಗೆ ಮದುವೆ ನೆಂಟಸ್ತಿಕೆ ಬಂದಿದೆ. ಹುಡುಗನ ಕಡೆಯವರು ವರದಕ್ಷಿಣೆ ರಹಿತ ಮದುವೆಗೆ ಸಿದ್ಧರಾಗಿದ್ದಾರೆ. ಬಂಟ ಸಮುದಾಯದ ಹುಡುಗ. ಇದೇ ಅಕ್ಟೋಬರ್ 19 ರಂದು ಮದುವೆ. ಆದರೆ ಹುಡುಗಿಗೆ ಚಿನ್ನದ ಕರಿಮಣಿ, ಸಣ್ಣಪುಟ್ಟ ಚಿನ್ನಾಭರಣ ಮಾಡಲೇಬೇಕು. ಮದುವೆ ದಿನದ ಹಾಲ್ ಮತ್ತು ಊಟೋಪಚಾರದ ಖರ್ಚು ಹುಡುಗಿ ಕಡೆಯವರು ಭರಿಸಲೇಬೇಕು. ಅದನ್ನು ಭರಿಸುವ ಶಕ್ತಿ ಬಡಕುಟುಂಬಕ್ಕಿಲ್ಲ. ಈಗವರು ಬಹಳಷ್ಟು ನೊಂದುಕೊಂಡಿದ್ದಾರೆ. ಹರೆಯಕ್ಕೆ ಬಂದ ಮಗಳಿಗೆ ಮದುವೆಯಾಗಬೇಕಾದರೆ ನಮ್ಮದೇ ಮನೆ ಹುಡುಗಿ ಎಂಬ ನೆಲೆಯಲ್ಲಿ ಎಲ್ಲರೂ ಕೈಜೋಡಿಸುವ ಅನಿವಾರ್ಯತೆ ಇದೆ.
ಈ ಕುಟುಂಬಕ್ಕೆ ನಮ್ಮಿಂದಾದ ಸಹಾಯ ನಾವು ಖಂಡಿತಾ ಮಾಡುತ್ತೇವೆ. ಆದರೆ ಅದು ಸಾಲದು. ಎರಡು ಕೈ ತಟ್ಟಿದರೇನೇ ಚಪ್ಪಾಳೆಯಾಗುವುದು ತಾನೆ. ನನ್ನ ಸಹೋದರ ಧರ್ಮದವರಾದ ಹಿಂದೂ ಬಾಂಧವರಲ್ಲಿ ಒಂದು ವಿನಂತಿ. ಈ ಕುಟುಂಬದ ಪರಿಸ್ಥಿತಿಯನ್ನು ಅರಿತು ನಿಮ್ಮ ಕಿಂಚಿತ್ ಕಾಣಿಕೆ ನೀಡಿ. ಹನಿ ಹನಿಗೂಡಿ ಹಳ್ಳ ಮಾಡೋಣ. ಅಸಹಾಯಕ ಸಹೋದರಿ ಮದುಮಗಳ ಮೊಗದಲ್ಲಿ ಸಂತೋಷ ಅರಳಿಸೋಣ. ನಿಮಗೆ ಸಹಾಯ ಮಾಡಲು ಮನಸ್ಸಿದ್ದರೆ ನನ್ನ ಮೊಬೈಲ್ ನಂಬ್ರಕ್ಕೆ ಸಂಪರ್ಕಿಸಿ. ನಾನು ಅವರನ್ನು ನಿಮಗೆ ಪರಿಚಯಿಸುತ್ತೇನೆ. ಸ್ವಾಭಿಮಾನಿ ಕುಟುಂಬವಾದುದರಿಂದ ನಾನಿಲ್ಲಿ ಅವರ ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿಟ್ಟಿದ್ದೇನೆ.
ರಶೀದ್ ವಿಟ್ಲ. (+91 9741993313)
ಅಥವಾ
(ಹನೀಫ್ ಹಾಜಿ) +91 9980880860







